ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಅವರ ಮುಖಕ್ಕೆ ಕಿಡಿಗೇಡಿಯೊಬ್ಬ ನಗರದ ಪಂಪ್‌ವೆಲ್ ಬಳಿ ಸೆಗಣಿ ಬಳಿದು ಪರಾರಿಯಾಗಿದ್ದಾನೆ.
ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ತನಿಖಾ ದಳದ ಮುಖ್ಯಸ್ಥರಾಗಿರುವ ಸೋಮಯಾಜಿ ಅವರು ನಗರದ ಆಸುಪಾಸಿನ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ ಊಟಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ.
ಘಟನೆ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸೋಮಯಾಜಿ, `ಪರೀಕ್ಷಾ ಕರ್ತವ್ಯದಲ್ಲಿದ್ದ ನಾನು ನಾಲ್ವರು ಸಹೋದ್ಯೋಗಿಗಳ ಜತೆ ಪಂಪ್‌ವೆಲ್‌ನ ಪದ್ಮಶ್ರೀ ಹೋಟೆಲ್‌ನಲ್ಲಿ ಊಟ ಮಾಡಿದ್ದೆ. ಸಹೋದ್ಯೋಗಿಯೊಬ್ಬರು ಊಟ ಮುಗಿಸಿರದ ಕಾರಣ ನಾನು ಹೋಟೆಲ್ ಹೊರಗೆ ಬಂದು ನಿಂತಿದ್ದೆ. ಆಗ ಕಿಡಿಗೇಡಿಯೊಬ್ಬ ಕೈಯಲ್ಲಿ ಸೆಗಣಿ ಹಿಡಿದುಕೊಂಡು ಹಿಂದಿನಿಂದ ಬಂದು ಮುಖಕ್ಕೆ ಹಚ್ಚಿ ಪರಾರಿಯಾದ. ಜೀನ್ಸ್ ಪ್ಯಾಂಟ್ ಧರಿಸಿದ್ದ ಆತ ಉದ್ವಿಗ್ನನಾಗಿದ್ದ. ಅರೆ ಕ್ಷಣದಲ್ಲಿ ಅನಿರೀಕ್ಷಿತ ಘಟನೆ ನಡೆದಿದ್ದರಿಂದ ನಾನು ಆತನ ಚಹರೆ ಗುರುತಿಸಲು ಸಾಧ್ಯವಾಗಲಿಲ್ಲ. ನನ್ನ ಉಳಿದ ಸಹೋದ್ಯೋಗಿಗಳು ಊಟ ಮುಗಿಸಿ ಕಾರಿನಲ್ಲಿ ಕುಳಿತಿದ್ದರಿಂದ ಅವರೂ ಆತನನ್ನು ಗುರುತಿಸಿಲ್ಲ~ ಎಂದು ತಿಳಿಸಿದರು.
`ಸಮಾಜದ ಸ್ವಾಸ್ಥ್ಯ ಕೆಡಿಸುವ ಸಂಘಟನೆಗಳನ್ನು ಬಹಿರಂಗ ಸಭೆಗಳಲ್ಲಿ ನಾನು ಟೀಕಿಸುತ್ತಿದ್ದೆ. ಇತ್ತೀಚೆಗೆ ಸ್ಥಳೀಯ ಖಾಸಗಿ ಟಿವಿ ವಾಹಿನಿಯಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಕುರಿತ ಫೋನ್‌ಇನ್ ಕಾರ್ಯಕ್ರಮದಲ್ಲಿ ಗುರುಪುರದ ರಾಜಶೇಖರಾನಂದ ಸ್ವಾಮೀಜಿ ಜತೆ ಭಾಗವಹಿಸಿ, ಗೋಹತ್ಯಾ ನಿಷೇಧದ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದೆ. ಅದು ಈ ಘಟನೆಗೆ ಕಾರಣವಾಗಿರಬಹುದು~ ಎಂದರು. ಘಟನೆ ಕುರಿತು ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಸೋಮಯಾಜಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
`ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಮುಖಕ್ಕೆ ಕಿಡಿಗೇಡಿ ಸೆಗಣಿ ಬಳಿದ ದೃಶ್ಯ ಹೋಟೆಲ್‌ನ ಸಿ.ಸಿ.ಕ್ಯಾಮೆರದಲ್ಲಿ ಸೆರೆಯಾಗಿದ್ದು, ಶೀಘ್ರವೇ ಪತ್ತೆ ಹಚ್ಚುತ್ತೇವೆ~ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.