ADVERTISEMENT

ಬಂಗಾರಪ್ಪ ಅಸ್ಥಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಕುಮಟಾ (ಉ.ಕ.ಜಿಲ್ಲೆ):  ತಾಲ್ಲೂಕಿನ ಗೋಕರ್ಣದ ಕೋಟಿ ತೀರ್ಥದ ಬಳಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಸ್ಥಿಯನ್ನು ಜೆಡಿ (ಎಸ್) ಮುಖಂಡ ಮಧು ಬಂಗಾರಪ್ಪ ಅವರು ಶನಿವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ವಿಸರ್ಜಿಸಿದರು.

ಬಂಗಾರಪ್ಪ ಅವರ ಅಭಿಮಾನಿ ರಾಜು ಅಡಿ ಅವರ ಮನೆಗೆ ತೆರಳಿದ ಮಧು, ಅಲ್ಲಿ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ಅಲ್ಲಿಂದ ಬರಿಗಾಲಲ್ಲಿ ನಡೆದುಕೊಂಡು ಕೋಟಿ ತೀರ್ಥಕ್ಕೆ ತೆರಳಿ ಅಸ್ಥಿ ಸಂಚಯನ ಕ್ರಿಯೆ ನಡೆಸಿ, ಪ್ರಾಯಶ್ಚಿತ್ತ ಹವನ, ಸೂಕ್ತಾದಿ ಪಾರಾಯಣ ಮುಂತಾದ ಧಾರ್ಮಿಕ ವಿಧಿ ನೆರವೇರಿಸಿದರು.

ನಂತರ ಸಮುದ್ರ ಸ್ನಾನ ಮುಗಿಸಿ ಬಂದು ಮಹಾಬಲೇಶ್ವರನ ಪೂಜೆ ನೆರವೇರಿಸಿದರು. ಬ್ರಾಹ್ಮಣ ಭೋಜನ ನಡೆಸಿದರು. ಮಹಾದೇವ ಅಡಿ ಅವರ ಮುಖಂಡತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಬಂಗಾರಪ್ಪ ಅವರ ಅಳಿಯಂದಿರರಾದ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಡೆಕ್ಕನ್ ಹೆರಾಲ್ಡ್ ಸಂಪಾದಕರಾದ ಕೆ.ಎನ್. ತಿಲಕ್‌ಕುಮಾರ್, ನಟ ಶಿವರಾಜ್‌ಕುಮಾರ್ ಹಾಗೂ ಪವನ ಕುಮಾರ, ಮಕ್ಕಳಾದ ಸುಜಾತಾ ತಿಲಕ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಅನಿತಾ ಪವನ್‌ಕುಮಾರ್, ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಬಂಗಾರಪ್ಪ ಅಭಿಮಾನಿ ಗಜು ನಾಯ್ಕ ಅಳ್ವೆಕೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.