ADVERTISEMENT

ಬತ್ತಿದ ಕೆರೆಗಳು; ಅಪಾಯದಂಚಿನಲ್ಲಿ ಜಲಚರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಶಿಡ್ಲಘಟ್ಟ: ಬಿರು ಬೇಸಿಗೆಯಲ್ಲಿ ಆಹಾರ ಮತ್ತು ನೀರು ಹುಡುಕಿಕೊಂಡು ಪಟ್ಟಣದ ಸುತ್ತಮುತ್ತ ಕೋತಿಗಳು ಕಾಣತೊಡಗಿದ್ದು, ಅದೇ ರೀತಿ ಆಮೆಯೊಂದು ಬುಧವಾರ ಕಾಣಸಿಕ್ಕಿದೆ.

ಆಹಾರ ಮತ್ತು ನೀರು ಹುಡುಕುವ ಭರದಲ್ಲಿ ಆಮೆಯು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಅದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.

ತಾಲ್ಲೂಕಿನ ಕೊತ್ತನೂರು ಗ್ರಾಮದ ಹಾಲಿನ ಡೇರಿ ಬಳಿಯಿರುವ ನೀರಿನ ತೊಟ್ಟಿಯನ್ನು ಶುಚಿಗೊಳಿಸುವಾಗ ಆಮೆ ಸಿಕ್ಕಿದೆ.

~ಕೆರೆಕುಂಟೆಗಳಲ್ಲಿ ಇರಬೇಕಾದ ಆಮೆಯು ತೊಟ್ಟಿಯಲ್ಲಿ ಕಂಡು ಬಂದದ್ದು ಅಚ್ಚರಿ ಉಂಟು ಮಾಡಿತು. ಕೆರೆಕುಂಟೆಗಳು ಬತ್ತಿ ಹೋಗಿದ್ದು, ಆಹಾರ ಮತ್ತು ನೀರು ಹುಡುಕಿಕೊಂಡು ಆಮೆ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ~ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್~ಪ್ರಜಾವಾಣಿ~ಗೆ ತಿಳಿಸಿದರು.

~ಕೆರೆಕುಂಟೆಗಳು ಬತ್ತುತ್ತಿರುವುದರಿಂದ ಜಲಚರಗಳು ಬದುಕುವುದು ಕಷ್ಟಕರವಾಗಿ ಪರಿಣಮಿಸಿದೆ. ಅವುಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿದೆ. ಕೆರೆಕುಂಟೆಗಳು ಶೀಘ್ರವೇ ಭರ್ತಿಯಾಗದಿದ್ದರೆ ಪರಿಸರ ಅಸಮತೋಲನ ಉಂಟಾಗುತ್ತದೆ~ ಎಂದು ವಲಯ ಅರಣ್ಯಾಧಿಕಾರಿ ಶ್ರೀನಿವಾಸಮೂರ್ತಿ ಅವರು ಆತಂಕ ವ್ಯಕ್ತಪಡಿಸಿದರು.

~ಕೆರೆಕುಂಟೆಗಳನ್ನು ರಕ್ಷಿಸುವುದಲ್ಲದೆ ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಕಾಡಿನಲ್ಲಿರಬೇಕಾದ ಪ್ರಾಣಿ ಪಕ್ಷಿಗಳು ಆಹಾರ ಮತ್ತು ನೀರು ಹುಡುಕಿಕೊಂಡು ಪಟ್ಟಣ ಅಥವಾ ಗ್ರಾಮಕ್ಕೆ ಬಂದರೆ ತಕ್ಷಣವೇ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಾಣಿ ಪಕ್ಷಿಗಳನ್ನು ಉಳಿಸುವಲ್ಲಿ ಸಹಕರಿಸಬೇಕು~ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.