ADVERTISEMENT

ಬರಗಾಲಕ್ಕೆ ಜಾನುವಾರುಗಳ ಬಿಕರಿ

ಬಸವರಾಜ ಸಂಪಳ್ಳಿ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST
ಬರಗಾಲಕ್ಕೆ ಜಾನುವಾರುಗಳ ಬಿಕರಿ
ಬರಗಾಲಕ್ಕೆ ಜಾನುವಾರುಗಳ ಬಿಕರಿ   

ಬಾಗಲಕೋಟೆ: ಬರದಿಂದ ಕಂಗಾಲಾಗಿರುವ ಜಿಲ್ಲೆಯ ಕೃಷಿಕರು ಜಾನುವಾರುಗಳಿಗೆ ಅಗತ್ಯ ಮೇವು -ನೀರು ಒದಗಿಸಲು ಸಾಧ್ಯವಾಗದೇ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡತೊಡಗಿದ್ದಾರೆ. ಮುಂಗಾರು ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದರೂ ಮಳೆಯಾಗದೆ ಇರುವುದರಿಂದ ಹೊಲದತ್ತ ಮುಖ ಮಾಡಲು ಸಾಧ್ಯವಾಗದೇ ಆತಂಕಕ್ಕೆ ಒಳಗಾಗಿರುವ ರೈತರಿಗೆ ಇದೀಗ ಜಾನುವಾರು ಸಾಕಾಣಿಕೆ ಹೊರೆಯಾಗತೊಡಗಿದೆ.

ಸಂಗ್ರಹಿಸಿ ಇಟ್ಟುಕೊಂಡಿದ್ದ ಮೇವಿನ ರಾಶಿ ಸಹ ಖಾಲಿಯಾಗಿದೆ. ಮೇವಿನ ಕೊರತೆಯಿಂದ ದರವೂ ದುಪ್ಪಟ್ಟಾಗಿದೆ. ಕೊಳ್ಳಲು ಶಕ್ತಿಯಿಲ್ಲ. ಬರ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇರುವುದರಿಂದ ಅನಿವಾರ್ಯವಾಗಿ ತಮ್ಮ ಕೃಷಿ ಜೀವನದ ಆಧಾರವಾದ ಎತ್ತು, ಆಕಳು, ಎಮ್ಮೆ, ಕುರಿಗಳನ್ನು ಮಾರಲು ಮುಂದಾಗಿದ್ದಾರೆ.

ಜಿಲ್ಲೆಯ ಮಳೆಯಾಶ್ರಿತ ಪ್ರದೇಶವಾದ ಹುನಗುಂದ, ಬಾದಾಮಿ ಮತ್ತು ಬಾಗಲಕೋಟೆ ತಾಲ್ಲೂಕಿನಲ್ಲಿ ಪಾಳು ಭೂಮಿ, ಹೊಲದ ಬದಿಯಲ್ಲಿ ಬೆಳೆಯುವ ಹಸಿರು ಹುಲ್ಲು ಜಾನುವಾರುಗಳಿಗೆ ಆಹಾರದ ಮೂಲವಾಗಿತ್ತು.  ಮಳೆಯಾಗದ ಕಾರಣ ಹೊಲ ಒಣಗಿ ಬಾಯ್ದೆರೆದು ನಿಂತಿದೆ. ಪರಿಣಾಮ, ಜಾನುವಾರುಗಳಿಗೆ ಮೇವು, ಕುಡಿವ ನೀರಿನ ಕೊರತೆ ಕಾಣಿಸಿಕೊಂಡಿದೆ.

ಕಬ್ಬು ಬೆಳೆಯುವ ಜಮಖಂಡಿ, ಮುಧೋಳ ಮತ್ತು ಬೀಳಗಿ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಹಸಿರು ಮೇವು ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ಕಟ್ಟಿ ಸಾಕುತ್ತಿದ್ದಾರೆ.

ಕಡಿಮೆ ಬೆಲೆಗೆ ಮಾರಾಟ: ಬಾಗಲಕೋಟೆ ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಜಾನುವಾರು ಸಂತೆಯಲ್ಲಿ ಎಮ್ಮೆಗಳನ್ನು ಮಾರಾಟ ಮಾಡಲು ಬಂದಿದ್ದ ಮುಚಖಂಡಿ ಗ್ರಾಮದ ಭೀಮಪ್ಪ ಜಲಗೇರಿ, ಯಲ್ಲವ್ವ ಮಾಸ್ತಿ, ಮುಚಖಂಡೆಪ್ಪ ಖಾನಾಪುರ ಅವರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ, `ಬರದಿಂದ ಮನುಷ್ಯರೇ ಬದುಕು ಸಾಗಿಸುವುದು ಕಷ್ಟವಾಗಿದೆ. ಈ ನಡುವೆ ಜಾನುವಾರುಗಳಿಗೆ ಮೇವು -ನೀರು ಪೂರೈಸಲು ಸಾಧ್ಯವಾಗದಿರುವುದರಿಂದ ಮಾರಾಟ ಮಾಡಲು ಬಂದಿದ್ದೇವೆ~ ಎಂದರು.

`ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ತಿಳಿದಿರುವ ದಲ್ಲಾಳಿಗಳು ಬೇಕಾಬಿಟ್ಟಿ ಬೆಲೆಗೆ ಕೇಳುತ್ತಾರೆ. ರೂ 25 ರಿಂದ 30 ಸಾವಿರ ಬೆಲೆ ಬಾಳುವ ಎಮ್ಮೆಗಳನ್ನು ರೂ 15 ರಿಂದ 20 ಸಾವಿರಕ್ಕೆ ಕೇಳುತ್ತಾರೆ. ಕಡಿಮೆ ಬೆಲೆಗೆ ಕೊಡಲು ಮನಸ್ಸಿಲ್ಲ. ಎಮ್ಮೆಗಳನ್ನು ಸಾಕುವುದು ಕಷ್ಟವಾಗಿದೆ. ಅನಿವಾರ್ಯವಾಗಿ ಸಿಕ್ಕಷ್ಟು ಹಣಕ್ಕೆ ಮಾರಾಟ ಮಾಡಬೇಕಾಗಿದೆ. ಯಾರಾದರೂ ಅವುಗಳನ್ನು ಕೊಂಡು, ಚೆನ್ನಾಗಿ ಸಾಕಲಿ~ ಎಂದು ನೋವಿನಿಂದ ನುಡಿದರು.

ಗೋಶಾಲೆ: ಜಿಲ್ಲಾಡಳಿತ ಈಗಾಗಲೇ ಜಮಖಂಡಿ ತಾಲ್ಲೂಕಿನ ತೊದಲಬಾಗಿಯಲ್ಲಿ ಗೋಶಾಲೆ ತೆರೆದಿದೆ.  ಸುಮಾರು 1,500 ಜಾನುವಾರುಗಳಿಗೆ ನೀರು-ಮೇವಿನ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಜಮಖಂಡಿ ತಾಲ್ಲೂಕಿನ ರೈತರಿಗೆ ಅನುಕೂಲವಾಗಿದೆ. ಹುನಗುಂದ, ಬಾದಾಮಿ ಮತ್ತು ಬಾಗಲಕೋಟೆ ಭಾಗದಲ್ಲಿ ಗೋಶಾಲೆ, ಮೇವಿನ ಬ್ಯಾಂಕ್ ಸೌಲಭ್ಯವನ್ನು ಕಲ್ಪಿಸದಿರುವ ಕಾರಣ ಈ ಭಾಗದ ಸಣ್ಣಪುಟ್ಟ ಕೃಷಿಕರು ತಮ್ಮ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಒಂದು ಬಂಡಿ ಕಣಕಿಗೆ (12 ಹೊರೆ) ರೂ 1200, ಕ್ವಿಂಟಲ್ ಗೋವಿನ ಜೋಳದ ನುಚ್ಚಿಗೆ ರೂ 1400, ಕ್ವಿಂಟಲ್ ಶೇಂಗಾ ಹಿಂಡಿಗೆ ಕನಿಷ್ಠ ನಾಲ್ಕರಿಂದ ಐದು ಸಾವಿರ ರೂಪಾಯಿ ಇದ್ದರೆ ಹಸಿ ಮೇವು ಟನ್‌ಗೆ  ಎರಡು ಸಾವಿರ ರೂಪಾಯಿ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.