ADVERTISEMENT

ಬರಪೀಡಿತ ಗ್ರಾಮಗಳಿಗೆ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಔರಾದ್: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಂಗಳವಾರ ತಾಲ್ಲೂಕಿನ ವಿವಿಧ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಆಲೂರ (ಬಿ), ಬನಸಿ ತಾಂಡಾಕ್ಕೆ ಭೇಟಿ ನೀಡಿದರು. ನೀರಿನ ಮೂಲದಿಂದ ಪೈಪ್‌ನಲ್ಲಿ  ಆಲೂರ (ಬಿ)ಗೆ ಪೂರೈಸಲು ಸಲಹೆ ನೀಡಿದರು. ಸೋರಳ್ಳಿಯಲ್ಲಿ ತೆರೆದ ಬಾವಿ ಮತ್ತು ವಿಜಯನಗರ ತಾಂಡಾದಲ್ಲಿ ಹೊಸ ಬೋರ್‌ವೆಲ್ ಕೊರೆಯಲು ಸೂಚಿಸಿದರು. ವಡಗಾಂವ್‌ನ ಚಾಂಬರ್‌ಗಲ್ಲಿಯಲ್ಲಿ ಹೊಸ ಬೋರ್‌ವೆಲ್‌ನಲ್ಲಿ ನೀರು ಬರುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ಕಾರ್ಯದರ್ಶಿಗಳು ಇಲ್ಲಿ ಟ್ಯಾಂಕ್ ನಿರ್ಮಿಸಲು ಸಲಹೆ ನೀಡಿದರು.
 
ಕೊಳ್ಳೂರ್ ಹರಿಜನವಾಡ ಗಲ್ಲಿಗೆ ತೆರೆದ ಬಾವಿಯಿಂದ ಪೈಪ್ ಮೂಲಕ ನೀರು ಕೊಡಲು ಹೇಳಿದರು. ತುಳಜಾಪುರ, ಬೋರಾಳ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು. ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್‌ರೇ ಯಂತ್ರ ದೂಳು ತಿನ್ನುತ್ತಿರುವುದನ್ನು ಗಮನಿಸಿದರು. ತಾಲ್ಲೂಕು ಆಸ್ಪತ್ರೆಯಲ್ಲಿ ಎಕ್ಸ್‌ರೇ ಇಲ್ಲ ಎಂದ ಮೇಲೆ ರೋಗಿಗಳು ಎಲ್ಲಿ ಹೋಗಬೇಕು ಎಂದು ವೈದ್ಯರನ್ನು ಪ್ರಶ್ನಿಸಿದರು.

ಹೊಸ ಎಕ್ಸ್‌ರೇ ಯಂತ್ರಕ್ಕೆ ಬೇಡಿಕೆ ಸಲ್ಲಿಸುವಂತೆ ಸೂಚಿಸಿದರು. ಸರ್ಕಾರದಿಂದ ಮಂಜೂರಾತಿ ಪಡೆದು ರಕ್ತನಿಧಿ ಕೇಂದ್ರ ಆರಂಭಿಸುವಂತೆ ಹೇಳಿದರು. ವೈದ್ಯರು, ಸಿಬ್ಬಂದಿ ಕೊರತೆ ಬಗ್ಗೆ ತಿಳಿಸಿದಾಗ ಸರ್ಕಾರಕ್ಕೆ ಮಾಹಿತಿ ಸಲ್ಲಿಸುವಂತೆ ತಿಳಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸ್ಥಾಪಿಸಲಾದ ಮೇವು ಕೇಂದ್ರಕ್ಕೆ ಭೇಟಿ ನೀಡಿದರು.

ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರ ಅನೀಸ್ ಅಹಮ್ಮದ್, ತಹಸೀಲ್ದಾರ್ ಶಿವಕುಮಾರ ಶೀಲವಂತ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಅಶೋಕ ಕಾಳಗಿ, ಡಾ. ಕಾಶೆಂಪುರ ಮಾರ್ತಂಡಕರ್, ಡಾ. ಪ್ರವೀಣಕುಮಾರ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.