ADVERTISEMENT

ಬರಪೀಡಿತ ಪ್ರದೇಶ ಘೋಷಣೆಗೆ ರೈತಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2011, 19:30 IST
Last Updated 30 ಸೆಪ್ಟೆಂಬರ್ 2011, 19:30 IST
ಬರಪೀಡಿತ ಪ್ರದೇಶ ಘೋಷಣೆಗೆ ರೈತಸಂಘ ಆಗ್ರಹ
ಬರಪೀಡಿತ ಪ್ರದೇಶ ಘೋಷಣೆಗೆ ರೈತಸಂಘ ಆಗ್ರಹ   

ಚಿತ್ರದುರ್ಗ: ಜಿಲ್ಲೆಯನ್ನು ~ಬರಗಾಲ ಪೀಡಿತ ಪ್ರದೇಶ~ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತಸಂಘದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ ಅವರಿಗೆ ಮನವಿ ಸಲ್ಲಿಸಿದರು.

ಜುಲೈ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಹುಟ್ಟಿರುವ ಪೈರಿಗೂ ಮಳೆ ಇಲ್ಲದೇ ಒಣಗುತ್ತಿವೆ. ರೈತರು ಸಾಲ ಸೋಲ ಮಾಡಿ ಭೂಮಿ ಹದ ಮಾಡಿ ಬೀಜ, ಗೊಬ್ಬರ ಹಾಕಿಕೊಂಡು ಮಳೆಗಾಗಿ ಕಾಯುತ್ತಿದ್ದು, ಹಳ್ಳಿಗಳು ಬಿಕೋ ಎನ್ನುತ್ತಿವೆ ಎಂದು ಹೇಳಿದರು.

ದಾಬೂಲ್‌ನಿಂದ ಬೆಂಗಳೂರುವರೆಗೆ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಅಳವಡಿಸಲು ಲಿಮಿಟೆಕ್ ಸಂಸ್ಥೆ ಜಿಲ್ಲೆಯ ಯಳಗೋಡು, ಮುದ್ದಾಪುರ ಸೇರಿದಂತೆ ವಿವಿದೆಢೆ ರೈತರ ಫಲವತ್ತಾದ ಜಮೀನುಗಳಲ್ಲಿ 100 ಅಡಿ ಅಗಲ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಗೊಂಡಿರುವುದು ರೈತರಿಗೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.

ರೈತರು ಸಹಕಾರಿ ಮತ್ತು ಸರ್ಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಬೇಕು, ಗುಳೇ ಹೋಗುವುದನ್ನು ತಪ್ಪಿಸಬೇಕು, ಗ್ರಾಮ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕು ಎಂದು ಆಗ್ರಹಿಸಿದರು.

ರೈತಸಂಘ ರಾಜ್ಯ ಘಟಕದ ಬಾಗೇನಾಳ್ ಕೊಟ್ರಬಸಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ತಿಮ್ಮಯ್ಯನಹಳ್ಳಿ ರಾಜಣ್ಣ, ಕೆ.ಬಿ. ಬೋರಯ್ಯ, ರವಿಕುಮಾರ್, ಡಿ. ಚಂದ್ರಶೇಖರ್ ನಾಯ್ಕ, ಎಂ.ಸಿ. ಪ್ರಕಾಶ್, ಎಸ್.ಟಿ. ಮಂಜುನಾಥ್, ವಿ. ಸುರೇಶ್‌ರೆಡ್ಡಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.