ಚಿತ್ರದುರ್ಗ: ಬರ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಯುವಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಜಾನುವಾರು, ಮೇವು ಹಾಗೂ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕೇವಲ ತೋರಿಕೆಗಾಗಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಜನಸಾಮಾನ್ಯರ ಬದುಕಿನ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಬರದಿಂದ ತತ್ತರಿಸಿರುವ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೈಪ್‌ಲೈನ್ ಮತ್ತು ಕೊಳವೆಬಾವಿ ಕಾಮಗಾರಿ ಹೆಸರಿನಲ್ಲಿ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಪಾಲಾಗುತ್ತಿದೆ. ಮೇವಿನ ಸೂಕ್ತ ವ್ಯವಸ್ಥೆ ಇಲ್ಲದೆ ಜಾನುವಾರುಗಳು ನರಳುತ್ತಿವೆ. ಗುಣಮಟ್ಟದ ಮೇವು ಪೂರೈಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕಾರ್ಯಕರ್ತರು ದೂರಿದರು.
ಬರದಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ಸರ್ಕಾರ ರೈತರಿಗೆ ನೀಡಿಲ್ಲ. ಹಲವು ರೈತರು ಈ ವರ್ಷ ಬಿತ್ತನೆ ಸಹ ಮಾಡಿಲ್ಲ. ಅಂತಹ ರೈತರಿಗೆ ಒಂದು ಪೈಸೆ ಪರಿಹಾರ ದೊರೆತಿಲ್ಲ. ರೈತರು ಕಣ್ಣೀರು ಸುರಿಸುವಂತಾಗಿದ್ದರೂ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಖಾಲೀದ್ ಹುಸೇನ್, ಡಾ. ಬಿ. ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.