ADVERTISEMENT

ಬರ: ಪ್ರಧಾನಿ ಬಳಿಗೆ ಕಾಂಗ್ರೆಸ್ ನಿಯೋಗ- ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಕೊಪ್ಪಳ: ರಾಜ್ಯದಲ್ಲಿನ ಬರ ನಿರ್ವಹಣೆಗಾಗಿ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿ ಡಾ.ಮನಮೋಹನ್‌ಸಿಂಗ್ ಅವರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಮುಖಂಡರ ನಿಯೋಗ ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಲಿದೆ.

ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆಯಲು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪಕ್ಷ ರಚಿಸಿರುವ ತಂಡಗಳು ಏ. 19ರ ವರೆಗೆ ಬರ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸಲಿವೆ. ನಂತರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ಸಲಹೆಗಳನ್ನು ಒಳಗೊಂಡ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿವೆ.

ಅದೇ ರೀತಿ ಏ. 28ರಂದು ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜ್ಯಕ್ಕೆ ಆಗಮಿಸಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಬರ ಪರಿಸ್ಥಿತಿ ಕುರಿತಂತೆ ವಿಸ್ತೃತ ವರದಿಯೊಂದನ್ನು ಸಲ್ಲಿಸಿ, ಹೆಚ್ಚಿನ ಹಣಕಾಸಿನ ನೆರವು ಒದಗಿಸುವಂತೆ ಮನವಿ ಮಾಡಲಾಗುವುದು ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.