ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹರ್ಷಗೊಂಡಿರುವ ರೈತರು ಹೊಲಗಳನ್ನು ಹದಗೊಳಿಸಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಜಮೀನನ್ನು ಉಳುಮೆ ಮಾಡಿ ಹದಗೊಳಿಸಿದ್ದ ರೈತರು ಗುರುವಾರ ಬಿತ್ತನೆ ಕಾರ್ಯ ಆರಂಭಿಸಿದರು.
ಕೆಲ ಗ್ರಾಮಗಳಲ್ಲಿ ರೈತರು ಟ್ರ್ಯಾಕ್ಟರ್ ಮತ್ತು ಎತ್ತುಗಳ ಮೂಲಕ ಜಮೀನಿನ ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕೆಲ ಗ್ರಾಮಗಳಲ್ಲಿ ರೈತರು ರಾಗಿ ಮತ್ತು ದ್ವಿದಳ ಧಾನ್ಯ ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬರಗಾಲ ಆವರಿಸಿದ್ದರಿಂದ ಬೇಸರದ ಜೊತೆಗೆ ಆತಂಕವು ಕಾಡುತಿತ್ತು. ಈ ವರ್ಷವೂ ಮಳೆಯಾಗದಿದ್ದರೆ, ಗ್ರಾಮದಲ್ಲಿ ಬಾಳುವುದು ಹೇಗೆ ಮತ್ತು ಸಾಲ ತೀರಿಸುವುದು ಹೇಗೆ ಎಂಬ ಭಯವಿತ್ತು. ಆದರೆ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಬೀಜಗಳನ್ನು ತಂದು ಬಿತ್ತನೆ ಮಾಡುತ್ತಿದ್ದೇವೆ. ಮಳೆ ಮತ್ತು ಬಿತ್ತನೆ ಕಾರ್ಯ ವಿಳಂಬವಾಗಿದ್ದರೂ ಉತ್ತಮ ಇಳುವರಿಯಾಗುತ್ತದೆ ಎಂಬ ನಂಬಿಕೆಯಿದೆ~ ಎಂದು ಹಂಡಿಗನಾಳ ಗ್ರಾಮದ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.
`ರಸಗೊಬ್ಬರದ ಬೆಲೆಯೂ ದುಬಾರಿಯಾಗಿದೆ. ಸಾಲ ಮಾಡಿಕೊಂಡು ಕೃಷಿ ಮಾಡಬೇಕಾದ ಪರಿಸ್ಥಿತಿಯಿದೆ. ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಸಿಗುತ್ತಿಲ್ಲ. ಕಷ್ಟ-ನಷ್ಟಗಳು ಹಲವು ಇದ್ದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ವಿಶ್ವಾಸವಿದೆ. ಸಂಕಷ್ಟಗಳು ಎದುರಾದಾಗ, ಸರ್ಕಾರ ಸಕಾಲಕ್ಕೆ ನೆರವಿಗೆ ಬಂದರೆ ಅನುಕೂಲವಾಗುತ್ತದೆ~ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.