ADVERTISEMENT

ಬೀದರ್ ಉತ್ಸವಕ್ಕೆ ಕೋಟೆ ಸಜ್ಜು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST
ಬೀದರ್ ಉತ್ಸವಕ್ಕೆ ಕೋಟೆ ಸಜ್ಜು
ಬೀದರ್ ಉತ್ಸವಕ್ಕೆ ಕೋಟೆ ಸಜ್ಜು   

ಬೀದರ್: ಇಲ್ಲಿನ ಐತಿಹಾಸಿಕ ಕೋಟೆಯಲ್ಲಿ ಏಪ್ರಿಲ್ 7ರಿಂದ ಮೂರು ದಿನಗಳ ಕಾಲ ನಡೆಯಲಿರುವ `ಬೀದರ್ ಉತ್ಸವ~ಕ್ಕೆ ಸಿದ್ಧತೆ ಪೂರ್ಣಗೊಂಡಿದೆ.ಕೋಟೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮುಖ್ಯ ವೇದಿಕೆಯನ್ನು ವಿಶಿಷ್ಟವಾಗಿ ಸಿದ್ಧಪಡಿಸಲಾಗುತ್ತಿದೆ.
 
ಮುಖ್ಯ ವೇದಿಕೆಯ ಮುಂಭಾಗದಲ್ಲಿ ಗಣ್ಯರು, ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ್ ಹೊಂದಿರುವವರು ಹಾಗೂ ಸಾರ್ವಜನಿಕರಿಗಾಗಿ ಒಟ್ಟು 15 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.

ದೂಳು ಏಳದಂತೆ ಕುರ್ಚಿಗಳ ಕೆಳಗೆ ಕಾರ್ಪೆಟ್‌ಗಳನ್ನು ಹಾಸಲಾಗಿದೆ. ಕೋಟೆ ಒಳಗೆ ಇರುವ ರಸ್ತೆಗಳ ಮೇಲೂ ಜಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಕುಡಿಯುವ ನೀರಿಗಾಗಿ ಅಲ್ಲಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಇರಿಸಲಾಗಿದೆ. ಇಡೀ ಕೋಟೆಯನ್ನು  ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತಿದೆ.

ಕೋಟೆಯ ಆವರಣದಲ್ಲಿ ತಿಂಡಿ ತಿನಿಸು ಅಂಗಡಿ, ವಸ್ತು ಪ್ರದರ್ಶನ ಏರ್ಪಡಿಸಲು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕಿಡ್‌ಜೋನ್, ಮಹಿಳಾ ಉತ್ಸವ, ಪತಂಗ ಉತ್ಸವ ಮತ್ತಿತರ ಸಿದ್ಧತಾ ಕಾರ್ಯಗಳು ಶುಕ್ರವಾರ ಭರದಿಂದ ನಡೆದವು. ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಸ್ಥಳಗಳನ್ನು ಪರಿಶೀಲಿಸಿದರು.

ಶನಿವಾರ ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವದಲ್ಲಿ ಮೂರು ದಿನಗಳ ಕಾಲ ದೇಶದ ಖ್ಯಾತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

ಗುರುಕಿರಣ ತಂಡದಿಂದ ಸಂಗೀತ, ಫ್ಲೋರಾ ಸೈನಿ ನೃತ್ಯ, ಸಿದ್ಧಿ ಧಮಾಲ್ ತಂಡದ ಜಾನಪದ ನೃತ್ಯ, ಕುನಾಲ್ ಗಾಂವಾಲ್ ಸಂಗೀತ, ಸಾಬ್ರಿ ಬ್ರದರ್ಸ್ ಖವ್ವಾಲಿ, ಹರ್ಷದೀಪ್ ಕೌರ್ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.