ರಾಯಚೂರು: ತಾಲ್ಲೂಕಿನ ಜುಲುಂಗೇರಾ, ಲಿಂಗನಖಾನದೊಡ್ಡಿ ಹಾಗೂ ಮಾಸದೊಡ್ಡಿ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಸಂಬಂಧಪಟ್ಟ ಗ್ರಾಮದ ರೈತರು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜೆಸ್ಕಾಂ ರಾಯಚೂರು ವಿಭಾಗದ ಕಚೇರಿ ಎದುರು ಮೊದಲು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿಯಲ್ಲಿ ಸಾಗಿ ಮನವಿ ಅರ್ಪಿಸಿದರು.
ಲಿಂಗನಖಾನದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ತಿಂಗಳಿಂದ ದಿನಕ್ಕೆ ಕೇವಲ 2 ಗಂಟೆ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ. ಪಂಪ್‌ಸೆಟ್ ಹೊಂದಿರುವ ರೈತರ ಬೆಳೆಗಳು ಹಾಳಾಗುತ್ತಿವೆ. ಬತ್ತ ಹಾಗೂ ಇತರ ಬೆಳೆಗಳು ಒಣಗುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರವು ದಿನಕ್ಕೆ 12 ಗಂಟೆ ವಿದ್ಯುತ್ ಕಲ್ಪಿಸಲು ಸೂಚನೆ ನೀಡಿದ್ದರೂ ಅನುಷ್ಠಾನ ಮಾತ್ರ ಆಗಿಲ್ಲ. ಕನಿಷ್ಠ 8ರಿಂದ 10 ಗಂಟೆ ಸರಬರಾಜು ಮಾಡಬೇಕು. ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಕಲ್ಪಿಸಿದರೆ ಬೆಳೆ ಸಂರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳ ಭರವಸೆ: ತಾಂತ್ರಿಕ ತೊಂದರೆಯಿಂದ ಬೇರೆ ಮಾರ್ಗದಿಂದ ಈ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಪರಿವರ್ತಕ ದುರಸ್ತಿ ಮಾಡಿ ಒಂದೆರಡು ದಿನದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ಮನವಿ ಸ್ವೀಕರಿಸಿದ ಜೆಸ್ಕಾಂನ ಅಧಿಕಾರಿಗಳು ಭರವಸೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ಅವರಿಗೂ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್ ಶಿವಕುಮಾರ ಯಾದವ್, ಪದಾಧಿಕಾರಿಗಳಾದ ಎಚ್.ಕೆ ರವಿಕುಮಾರ, ಮನೋರಾಜ, ಬಿ ಸ್ವಾಮಿ ನಾಯಕ ಆಸ್ಕಿಹಾಳ, ಮಹದೇವ ಯಾದವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.