ADVERTISEMENT

ಬೋನಿಗೆ ಬಿದ್ದ ನರಭಕ್ಷಕ ಚಿರತೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST
ಬೋನಿಗೆ ಬಿದ್ದ ನರಭಕ್ಷಕ ಚಿರತೆ
ಬೋನಿಗೆ ಬಿದ್ದ ನರಭಕ್ಷಕ ಚಿರತೆ   

ಕಂಪ್ಲಿ: ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದ ಕೆರೆ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಚಿರತೆ ಬಿದಿದ್ದೆ.

ಮಾ. 10ರಂದು ಸಂಜೆ ಗ್ರಾಮದ ಗುಂಡೆ ಹನುಮಪ್ಪ ದೇವಸ್ಥಾನ ಬಳಿ ಕಬ್ಬೇರು ಜಡೆಪ್ಪನ ಬಲಗಾಲಿಗೆ ಕಡಿದು ಗಾಯಗೊಳಿಸಿ ಈ ಚಿರತೆ ನಾಪತ್ತೆಯಾಗಿತ್ತು. ಅಂದಿನಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಮಾ. 11ರಂದು  ದೇವಸ್ಥಾನ ಬಳಿ ಬೋನು ಅಳವಡಿಸಿದ್ದರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆಗಳನ್ನು ಪತ್ತೆ ಹಚ್ಚಿ ದಿಕ್ಕು ಬದಲಿಸಿರುವುದನ್ನು ಖಚಿತಪಡಿಸಿಕೊಂಡು ಗ್ರಾಮದ ಕೆರೆ ಏರಿ ಬಳಿ ಮಾ. 16ರಂದು ಬೋನು ಅಳವಡಿಸಿದರು. ಮಾ. 17ರ ರಾತ್ರಿ ಗ್ರಾಮದ ಒಳಗಡೆ ಪ್ರವೇಶಿಸುವ ತವಕದಲ್ಲಿದ್ದ ಚಿರತೆ ಬೋನಿನ ಒಂದು ಭಾಗದಲ್ಲಿದ್ದ ನಾಯಿಯನ್ನು ಕಂಡು ಬೋನನ್ನು ಪ್ರವೇಶಿಸಿ ಸಿಕ್ಕಿ ಹಾಕಿಕೊಂಡಿದೆ.

ಸುಮಾರು 8 ವರ್ಷದ ಈ ಚಿರತೆ ಒಂದೂವರೆ ತಿಂಗಳ ಹಿಂದೆ ಮರಿ ಹಾಕಿರುವುದರಿಂದ ಆಹಾರಕ್ಕಾಗಿ ಅಲೆಯುತ್ತಿತ್ತು.
 ಬೋನಿಗೆ ಬಿದ್ದ ಚಿರತೆಯನ್ನು ದಾಂಡೇಲಿ ಅಭಯಾರಣ್ಯಕ್ಕೆ ಸಾಗಿಸಲಾಗುತ್ತಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದರು.

2002ರ ಡಿಸೆಂಬರ್‌ನಲ್ಲಿ ಚಿರತೆ ಗ್ರಾಮದ ಇದೇ ಕೆರೆ ಏರಿ ಬಳಿ ಬೋನಿಗೆ ಬಿದ್ದಿದ್ದನ್ನು ಇಲ್ಲಿ ನೆನಪಿಸಬಹುದು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ಕಿರಣ್, ವಲಯ ಅರಣ್ಯ ಅಧಿಕಾರಿ ಐ. ರವೀಂದ್ರನಾಥ, ಡಿವೈಎಸ್ಪಿ ಡಾ. ಕೆ.ವಿ. ಜಗದೀಶ್, ಪಿಎಸ್‌ಐ  ಡಾ.ಎಸ್. ಮಲ್ಲಿಕಾರ್ಜುನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.