ADVERTISEMENT

ಭದ್ರಾ ನೀರಿಗೆ ಆಗ್ರಹಿಸಿ ಅಂಚೆ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಮೊಳಕಾಲ್ಮುರು: ಭದ್ರಾ ಮೇಲ್ದಂಡೆ ಯೋಜನೆ ಅಡಿ ತಾಲ್ಲೂಕಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಮೊಗಲಹಳ್ಳಿಯಲ್ಲಿ ಮಂಗಳವಾರ ಪತ್ರ ಚಳವಳಿಗೆ ಚಾಲನೆ ನೀಡಲಾಯಿತು.

ಈ ಸಭೆಯಲ್ಲಿ ಮಾತನಾಡಿದ ಮುಖಂಡರು, ತಾಲ್ಲೂಕು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಡಾ.ನಂಜುಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕು ಎಂದು ಸೇರ್ಪಡೆಯಾಗಿದೆ. ವಾರ್ಷಿಕ 8-10 ಸೆಂ.ಮೀ. ಮಳೆ ಬೀಳುತ್ತದೆ. ಸಮರ್ಪಕ ಮಳೆ ಇಲ್ಲದೆ ಅಂತರ್ಜಲ ಕುಸಿದಿದೆ.
 
ಮೊಳಕಾಲ್ಮುರು, ಹೊಳಲ್ಕೆರೆ ಮತ್ತು ಜಗಳೂರು ತಾಲ್ಲೂಕುಗಳು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿವೆ. ಈ ತಾಲ್ಲೂಕುಗಳಲ್ಲಿ ನೀರು ಹರಿಸುವಂತೆ ಹೋರಾಟ ಆರಂಭವಾಗಿರುವ ಪರಿಣಾಮ ಸರ್ಕಾರದಿಂದ ನೀರು ಹರಿಸುವ ಆಶ್ವಾಸನೆ ಸಿಕ್ಕಿದೆ ಎಂದರು.

ಮೊಳಕಾಲ್ಮುರು ತಾಲ್ಲೂಕಿನ ಜನತೆ ಪಕ್ಷ, ಜಾತಿ, ಸಂಘಟನೆಗಳ ಭೇದ ಮರೆತು ಒಂದಾಗಿ ನೀರಾವರಿ ಹೋರಾಟ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂಬಂಧ ಕಳೆದ ವಾರ ತಾಲ್ಲೂಕಿನ ಕೆಲ ಮುಖಂಡರ ಸಮಿತಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಾಲ್ಲೂಕಿಗೆ ಯೋಜನೆಯಲ್ಲಿ ನೀರು ಹರಿಸುವಂತೆ ಮನವಿ ಮಾಡಿದೆ.  ಜತೆಗೆ, ಬೃಹತ್ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಸಲಾಗಿದ್ದು, ಅವರಿಂದ ಭರವಸೆ ಲಭ್ಯವಾಗಿದೆ ಎಂದು ಹೇಳಿದರು.


ಪತ್ರ ಚಳವಳಿಯಲ್ಲಿ ಪ್ರತಿ ಗ್ರಾಮದಿಂದ 500 ಅಂಚೆಪತ್ರಗಳನ್ನು ಮುಖ್ಯಮಂತ್ರಿಗೆ ರವಾನಿಸಲು ಉದ್ದೇಶಿಸಲಾಗಿದೆ.

ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.
ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಎಂ. ಈಶ್ವರಪ್ಪ, ಪಕ್ಷದ ಮುಖಂಡರಾದ ಡಿ. ಷಡಾಕ್ಷರಪ್ಪ, ಕೆ.ಟಿ. ಶ್ರೀರಾಮರೆಡ್ಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT