ADVERTISEMENT

ಭಾಗ್ಯಲಕ್ಷ್ಮಿ ಯೋಜನೆಗೆ ಹೊಸ ವ್ಯವಸ್ಥೆ

ಎಂ.ಮಹೇಶ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ದಾವಣಗೆರೆ: ರಾಜ್ಯ ಸರ್ಕಾರದ `ಭಾಗ್ಯಲಕ್ಷ್ಮೀ~ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಫಲಾನುಭವಿಗಳ ನೋಂದಣಿ ಕಾರ್ಯವನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದೆ.

ಕೆಲ ತಿಂಗಳ ಹಿಂದೆ ಜಾರಿಗೆ ಬಂದಿರುವ ಹೊಸ ವ್ಯವಸ್ಥೆಯಿಂದ, ಫಲಾನುಭವಿಗಳ ಮಾಹಿತಿಯು ಬಹುಬೇಗನೆ ಸಂಬಂಧಿಸಿದ ಅಧಿಕಾರಿಗಳಿಗೆ ರವಾನೆಯಾಗುತ್ತಿದೆ.

ಮಗುವಿನ ಮಾಹಿತಿಯನ್ನು ಅಂಚೆಯಲ್ಲಿ ಕಳುಹಿಸಿ, ಪರಿಶೀಲನೆಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಂತರ ನೋಂದಣಿ ಮಾಡುವ ವ್ಯವಸ್ಥೆ ಇಲ್ಲ. ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ನಿರ್ವಹಿಸಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೂ  ಕಡಿವಾಣ ಬಿದ್ದಿದೆ.

~ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ನೋಂದಣಿ ವ್ಯವಸ್ಥೆ ಬದಲಾಗಿದೆ. ಫಲಾನುಭವಿಯ ಕುಟುಂಬದ ಮುಖ್ಯಸ್ಥ ಶಾಶ್ವತ ಬಿಪಿಎಲ್(ಬಡತನ ರೇಖೆಗಿಂತ ಕೆಳಗಿರುವವರ) ಪಡಿತರ ಚೀಟಿ ಹೊಂದಿರಬೇಕು ಮತ್ತು ಆ ಪಡಿತರ ಚೀಟಿಯಲ್ಲಿ ಫಲಾನುಭವಿಯ ಹೆಸರಿರಬೇಕು. ಅಂಥವರು ಮಾತ್ರವೇ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಹಿಂದಿನಂತೆ, ತಾತ್ಕಾಲಿಕ ಪಡಿತರ ಚೀಟಿ ಅಥವಾ ವರಮಾನ ದೃಢೀಕರಣಪತ್ರ ಕೊಟ್ಟವರಿಗೆ ಭಾಗ್ಯಲಕ್ಷ್ಮೀ ಬಾಂಡ್ ಸಿಗುವುದಿಲ್ಲ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ರಾಜನಾಯ್ಕ ~ಪ್ರಜಾವಾಣಿ~ಗೆ ತಿಳಿಸಿದರು.

~ಹಿಂದೆ, ಫಲಾನುಭವಿಗೆ ಸಂಬಂಧಿಸಿದ ಮಾಹಿತಿಯನ್ನು ಸಿ.ಡಿಗಳಲ್ಲಿ ಅಥವಾ ಪ್ರಿಂಟ್ ತೆಗೆದು ಪ್ರತಿಯನ್ನು ಇಲಾಖೆಯ ಉಪ ನಿರ್ದೇಶಕರಿಗೆ ಕಳುಹಿಸಲಾಗುತ್ತಿತ್ತು. ಅವರು ನಿರ್ದೇಶಕರಿಗೆ ಕಳುಹಿಸುತ್ತಿದ್ದರು. ನಿರ್ದೇಶಕರು, ಬಾಂಡ್ ನೀಡುವ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಸಂಬಂಧಿಸಿದ ಅಧಿಕಾರಿಗೆ ರವಾನಿಸುತ್ತಿದ್ದರು.

ಈಗ, ಈ ಕಾರ್ಯ ಆನ್‌ಲೈನ್‌ನಲ್ಲಿ ನಿಮಿಷಗಳಲ್ಲಿಯೇ ಮುಗಿಯುತ್ತದೆ. ವಲಯಮಟ್ಟದಲ್ಲಿ ಮೇಲ್ವಿಚಾರಕರು ಕಳುಹಿಸುವ ಮಾಹಿತಿ ಪರಿಶೀಲಿಸಿ, ಹಿರಿಯ ಅಧಿಕಾರಿಗಳಿಗೆ ಕಳುಹಿಸುತ್ತೇವೆ. ತಂತ್ರಜ್ಞಾನ ಬಳಸಿ, ಇಲಾಖೆ ವೆಬ್‌ಸೈಟ್ ಮೂಲಕ ಕೆಲಸ ಸರಳಗೊಳಿಸಲಾಗಿದೆ. ಇದರಿಂದ ಸಮಯವೂ ಉಳಿತಾಯವಾಗುತ್ತದೆ. ಮಗುವಿನ ಅಗತ್ಯ ಮಾಹಿತಿಗಳೆಲ್ಲವೂ ದಾಖಲಾಗುತ್ತದೆ~ ಎಂದು ವಿವರಿಸಿದರು.

~ಆನ್‌ಲೈನ್‌ನಲ್ಲಿ ನೋಂದಣಿ ಕಾರ್ಯ ನಡೆಯುವುದರಿಂದ, ಅರ್ಜಿಗಳನ್ನು ನಕಲು ಮಾಡುವುದು, ಸೌಲಭ್ಯ ಅನರ್ಹರ ಪಾಲಾಗುವುದು ತಪ್ಪುತ್ತದೆ. ಶಾಶ್ವತ ಪಡಿತರ ಚೀಟಿ ಇಲ್ಲದಿರುವ ಯಾವುದೇ ಫಲಾನುಭವಿಗೆ ಸಂಬಂಧಿಸಿದ ಅರ್ಜಿಯನ್ನು ಸಾಫ್ಟ್‌ವೇರ್ ತಿರಸ್ಕರಿಸುತ್ತದೆ. ಹೊಸ ವ್ಯವಸ್ಥೆಯಿಂದ ಹಾಗೂ ಶಾಶ್ವತ ಬಿಪಿಎಲ್ ಪಡಿತರ ಚೀಟಿ ಕಡ್ಡಾಯಗೊಳಿಸಿದ್ದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ನೋಂದಣಿಯಲ್ಲಿನ ಭೌತಿಕ ಗುರಿ ಸಾಧನೆ ಶೇ. 25ರಷ್ಟು ಮಾತ್ರ ಆಗಿದೆ~ ಎನ್ನುತ್ತಾರೆ ಅವರು.

ಬಡವರಾದರೂ ಶಾಶ್ವತ ಬಿಪಿಎಲ್ ಪಡಿತರ ಚೀಟಿ ಸಿಕ್ಕಿಲ್ಲ ಎಂಬ ಕೊರಗು ಪೋಷಕರಿಗೆ ಬೇಡ. ಹೆಣ್ಣು ಮಗು ಜನಿಸಿದ ಒಂದು ವರ್ಷದೊಳಗೆ ಯೋಜನೆಯ ಲಾಭ ಪಡೆಯಲು ಪೋಷಕರು ಅರ್ಜಿ ಸಲ್ಲಿಸಬಹುದು. ಆ ಸಮಯದೊಳಗೆ ಶಾಶ್ವತ ಪಡಿತರ ಚೀಟಿ ಹೊಂದಿರಬೇಕು. ಏಕೆಂದರೆ, ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಗುವಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಬಡ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಹಾಗೂ ಹೆಣ್ಣುಮಕ್ಕಳ ಕುರಿತ ಧೋರಣೆ ಬದಲಿಸುವ ಉದ್ದೇಶದಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು 2007-08ರಿಂದ ಜಾರಿಗೊಳಿಸಿದೆ.

ಯೋಜನೆಯಡಿ, 2008ರಿಂದ ಪ್ರಾರಂಭಿಕ ಠೇವಣಿ ಮೊತ್ತವನ್ನು ರೂ 10,000 ದಿಂದ ರೂ 19,300ಕ್ಕೆ (ಮೊದಲನೇ ಮಗುವಿಗೆ) ಹಾಗೂ ರೂ 18,350 (2ನೇ ಮಗುವಿಗೆ)ಕ್ಕೆ ಹೆಚ್ಚಿಸಲಾಗಿದೆ. ಫಲಾನುಭವಿಗೆ 18 ವರ್ಷ ತುಂಬಿದ ಬಳಿಕ ರೂ 1 ಲಕ್ಷ ದೊರೆಯುತ್ತದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.