ADVERTISEMENT

ಭೂಕಂಪ ಸಂತ್ರಸ್ತರಿಗೆ ಚಂದಾ ವಸೂಲಿ: ಜಪಾನ್ ಯುವತಿ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಮೈಸೂರು: ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ದುರಂತದಲ್ಲಿ ನಲುಗಿದ ಸಂತ್ರಸ್ತರಿಗೆ ಪರಿಹಾರ ಹಣ  ಕಳುಹಿಸುವುದಾಗಿ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಚಂದಾ ವಸೂಲಿ  ಮಾಡುತ್ತಿದ್ದ ಜಪಾನ್ ಯುವತಿಯನ್ನು ಲಷ್ಕರ್ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು. ಜಪಾನ್ ಮೂಲದ ಮೆಗುಮಿ ಮೈದ (25) ಎಂಬ ಯುವತಿ ಬಸ್ ನಿಲ್ದಾಣದಲ್ಲಿ ‘ಭೂಕಂಪ ಸಂತ್ರಸ್ತರಿಗೆ ಪರಿಹಾರ ನಿಧಿ’ ಎಂದು ಬರೆದಿದ್ದ ಡಬ್ಬವೊಂದನ್ನು ಹಿಡಿದು ಚಂದಾ ವಸೂಲಿ ಮಾಡುತ್ತಿರುವ ವಿಷಯ ತಿಳಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು.

ತನ್ನ ಕುಟುಂಬದವರು ಸಹ ಸುನಾಮಿ ದುರಂತದಲ್ಲಿ ನಲುಗಿದ್ದು ಅವರಿಗೆ ಸಹಾಯ ಮಾಡಲು ಹಣಕಾಸಿನ  ಅವಶ್ಯಕತೆ ಇರುವುದರಿಂದ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದೇನೆ. ದುರುದ್ದೇಶದಿಂದ ಹಣ ಚಂದಾ ಎತ್ತುತ್ತಿಲ್ಲ ಎಂದು ಆಕೆ ಹೇಳಿಕೆ ನೀಡಿದಳು.ಆಕೆಯ ಬಳಿ ರೂ.3 ಸಾವಿರ ಚಂದಾ ಹಣ ಸಂಗ್ರಹವಾಗಿತ್ತು. ಪರಿಹಾರ ನಿಧಿಗೆ ಕಳುಹಿಸಲು ಬ್ಯಾಂಕ್‌ಗೆ ಹಣ ಕಟ್ಟಿ ಸ್ವೀಕೃತಿ ಪತ್ರವನ್ನು ತಂದು ಠಾಣೆಗೆ ನೀಡುವಂತೆ ಸೂಚಿಸಿ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡ ಬಳಿಕ ಆಕೆಯನ್ನು ಪೊಲೀಸ್ ವಶದಿಂದ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.