ADVERTISEMENT

ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಕಾರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಹಿರಿಯೂರು: ವಿಧಾನಸೌಧ ಕಳ್ಳರ ಕೂಟವಾಗಿದೆ. ಭ್ರಷ್ಟಾಚಾರ ಕಲಿಸಿದವರು ರಾಜಕಾರಣಿಗಳೇ ಹೊರತು ಬೇರೆ ಯಾರೂ ಅಲ್ಲ. ಅವರಿಂದ ಇಡೀ ವ್ಯವಸ್ಥೆ ಭ್ರಷ್ಟವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆರೋಪಿಸಿದರು.

ನಗರದಲ್ಲಿ ಸೋಮವಾರ ವಿವಿಧ ಜನಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.‘ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರವೇ ಬಂದ್ ಕರೆ ಕೊಡುವ ಮೂಲಕ ಜನಜೀವನ ಅಸ್ತವ್ಯಸ್ತ ಮಾಡುವುದರ ಜತೆಗೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುತ್ತಿದೆ. ರಾಜ್ಯದಲ್ಲಿ ಇಷ್ಟೊಂದು ಸ್ವಜನ ಪಕ್ಷಪಾತ, ಅಕ್ರಮ ಮಾಡಿರುವ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ.

ಇವರಿಂದ ಸಂವಿಧಾನದ ಗೌರವ ಹಾಳಾಗಿದೆ. ಸಾರ್ವಜನಿಕ ಹಣ ದುರುಪಯೋಗ ಆಗಿರುವುದು ಖಚಿತವಾಗಿದೆ.ಯಡಿಯೂರಪ್ಪ ಅವರ ಬದಲು ಬೇರೆಯವರು ಮುಖ್ಯಮಂತ್ರಿಯಾಗಲಿ, ಇಲ್ಲವೇ ಸರ್ಕಾರವನ್ನು ವಜಾಗೊಳಿಸುವ ತೀರ್ಮಾನ ಕೈಗೊಳ್ಳಲಿ’ ಎಂದು ಅವರು ಒತ್ತಾಯಿಸಿದರು.

ಎನ್‌ಡಿಎ ಅಧಿಕಾರದಲ್ಲಿದ್ದಾಗ ಏಕೆ ಬೋಫೋರ್ಸ್ ಹಗರಣದ ಬಗ್ಗೆ ತನಿಖೆ ನಡೆಸಿ ಶಿಕ್ಷೆ ವಿಧಿಸಲಿಲ್ಲ? ವಿದೇಶಗಳಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವ ಕೆಲಸ ಮಾಡಲಿಲ್ಲ?. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಬಂದ್ ಕರೆ ನೀಡಿದ್ದು ತಪ್ಪಲ್ಲವೆ? ಜನರ ಹಣವನ್ನು ಮಠಗಳಿಗೆ, ದೇವಸ್ಥಾನಗಳಿಗೆ ಹಂಚುತ್ತಿರುವುದು ಸರಿಯೆ? ಎಂದು ಅವರು ಪ್ರಶ್ನಿಸಿದರು.

ಕೆ.ಸಿ. ಹೊರಕೇರಪ್ಪ ಮಾತನಾಡಿದರು.ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ತುಳಸೀದಾಸ್, ಕೆ.ಆರ್. ದಿವಾಕರ್, ಕೆ.ಪಿ. ಶ್ರೀನಿವಾಸ್, ಘಾಟ್ ರವಿಕುಮಾರ್, ಜಿ.ಎಲ್. ನರಸಿಂಹ ಮೂರ್ತಿ, ಕಾಂತರಾಜ್ ಹುಲಿ, ಮೋಹನ್ ಕುಮಾರ್, ವಿ. ಅರುಣ್ ಕುಮಾರ್, ಚಿತ್ರಜಿತ್ ಯಾದವ್, ಪಿ. ಕೃಷ್ಣಮೂರ್ತಿ, ಮಸ್ಕಲ್ ನಾಗರಾಜ್, ವಕೀಲ ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.