ADVERTISEMENT

ಭ್ರಷ್ಟಾಚಾರದ ವಿರುದ್ಧ ಜಾಗೃತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಮಂಡ್ಯ: ದೇಶದಲ್ಲಿ ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರದ ಮೂಲವಾಗಿದ್ದು, ವ್ಯವಸ್ಥೆ ಬದಲಾಗಲು ಯುವಜನರು ಜಾಗೃತರಾಗಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಂಗಳವಾರ ಅಭಿಪ್ರಾಯಪಟ್ಟರು.

ಸಾಮಾಜಿಕ ಜಾಗೃತಿ ನಿಟ್ಟಿನಲ್ಲಿ ಲೋಕನಾಯಕ ಜೆಪಿ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ. ಜಯಪ್ರಕಾಶ್ ನಾರಾಯಣ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದವರು. ಆದರೆ, ಒಬ್ಬ ನಾಯಕನಿಗೆ ಸಿಗಬೇಕಾದ ಗೌರವ ಇಂದಿಗೂ ಜೆಪಿ ಅವರಿಗೆ ದೊರೆಯುತ್ತಿಲ್ಲ ಎಂದು ಅವರು ವಿಷಾದಿಸಿದರು.

ನಗರದ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ಜೆ.ಪಿ.ಜನ್ಮದಿನ - ಜೆ.ಪಿ.ಚಳುವಳಿಯ ಪ್ರಸ್ತುತತೆ: ಚರ್ಚೆ ಮತ್ತು ಸಂವಾದ~ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತುಂಬ ಜನರು ಜೆಪಿ ಅವರು ನೆಹರು ವಿರುದ್ಧ, ಕಾಂಗ್ರೆಸ್ ವಿರೋಧಿ ಭಾವನೆ ಹೊಂದಿದ್ದರು ಎಂಬ ಭಾವನೆ ಹೊಂದಿದ್ದಾರೆ. ಆದರೆ, ಅದು ತಪ್ಪು. ಅವರ ಹೋರಾಟ ಎಂದಿಗೂ ವ್ಯವಸ್ಥೆಯ ವಿರುದ್ಧವಾಗಿತ್ತು. ಇಂಥ ಮನೋಭಾವದ ನಾಯಕರನ್ನೇ ಒಗ್ಗೂಡಿಸಿ ಜನತಾ ಪಕ್ಷ ಕಟ್ಟಿದರು. ಆದರೆ, ಈ ಗುಂಪಿನ ಕೆಲವರಲ್ಲಿ ಪ್ರಧಾನಿ ಆಗುವ ಆಸೆ ಮೂಡಿದ್ದು ಉದ್ದೇಶವನ್ನೇ ಹಾಳು ಮಾಡಿತು ಎಂದರು.

ಸರ್ವೋದಯ ನಾಯಕ ಸುರೇಂದ್ರ ಕೌಲಗಿ ಅವರು, ಜೆಪಿ ಅವರು ರಾಜಕಾರಣಿ, ಸಮಾಜವಾದಿ, ಸ್ವಾತಂತ್ರ್ಯ ಹೋರಾಟಗಾರ ಎಲ್ಲವೂ ಆಗಿದ್ದು, ತನ್ನ ರಚನಾತ್ಮಕ ಕಾರ್ಯಗಳಿಂದ ಯುವಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಶ್ಲಾಘಿಸಿದರು.

ಜವಹರಲಾಲ್ ನೆಹರೂ ಅವರಿಗೆ ಸರಿಸಮಾನವಾದ ವ್ಯಕ್ತಿತ್ವ ಇದ್ದ ವ್ಯಕ್ತಿ ಅವರೊಬ್ಬರೇ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜೆಪಿ ಅವರ ವ್ಯಕ್ತಿ ಚಿತ್ರ ನೀಡಿದ ಪತ್ರಕರ್ತ ಶ್ರೀಪಾದು ಅವರನ್ನು ಗೌರವಿಸಲಾಯಿತು.

ಮಾಜಿ ಸ್ಪೀಕರ್ ಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದು, ಎಸ್.ಡಿ.ಜಯರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಎಸ್.ಡಿ.ಜಯರಾಂ, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಮಂಡ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಾಚಲಮೂರ್ತಿ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ಧರಾಮೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.