ADVERTISEMENT

ಭ್ರಷ್ಟಾಚಾರ ನಿರ್ಮೂಲನೆ: ಆಸ್ಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:50 IST
Last Updated 2 ಮೇ 2011, 19:50 IST

 ಕಡೂರು: ಭ್ರಷ್ಟ ರಾಜ್ಯ ಸರ್ಕಾರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಗಂಭೀರ ಹೋರಾಟ ನಡೆಸಬೇಕು. ಸಂಘಟಿತ ಹೋರಾಟ ನಡೆಸಿದಲ್ಲಿ ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂದು ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಉತ್ತೇಜಿಸಿದರು.

ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಸೋಮವಾರ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು ಜಿಲ್ಲೆ ಪಕ್ಷದ ನಾಯಕಿಗೆ ಮರುಜನ್ಮ ನೀಡಿತ್ತು ಎಂದು ನೆನಪಿಸಿಕೊಂಡರು.

ಇಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕಿದ್ದು, ಇದು ಎಲ್ಲ ಮುಖಂಡರ ಜವಾಬ್ದಾರಿ. ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯ ಈವರೆಗೂ ಭರದಿಂದ ಸಾಗಿದೆ. ಯುವಕರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಬಹುತೇಕ ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರೂ. 3ಕ್ಕೆ ಅಕ್ಕಿ, ರೂ. 2ಕ್ಕೆ ಗೋಧಿ ನೀಡುವ ಯೋಜನೆ ಹಮ್ಮಿಕೊಳ್ಳಲಿದೆ. ಕೇಂದ್ರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಲೋಪಗಳನ್ನು ಜಿಲ್ಲಾ ಸಮಿತಿ ಪಟ್ಟಿ ಮಾಡಿ ಕೇಂದ್ರ ಸಮಿತಿಗೆ ಕಳುಹಿಸಬೇಕು ಎಂದು ಸೂಚಿಸಿದರು.

ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎನ್.ಮೂರ್ತಿ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಬೀರೂರು ಬ್ಲಾಕ್ ಅಧ್ಯಕ್ಷ ವಿನಾಯಕ, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ನೀಲಕಂಠಪ್ಪ, ಎಐಸಿಸಿ ಸದಸ್ಯ ನಂಜಪ್ಪ, ಕೆ.ಬಿ.ಮಲ್ಲಿಕಾರ್ಜುನ್, ಕೆ.ಎಂ.ಕೆಂಪರಾಜು, ಸಾವಿತ್ರಿ ಗಂಗಣ್ಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.