ADVERTISEMENT

ಮಂಗಳೂರು ಕಾರಾಗೃಹ; ಗಾಂಜಾ, ಬ್ಲೇಡ್ ವಶ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:50 IST
Last Updated 1 ಜೂನ್ 2011, 18:50 IST

ಮಂಗಳೂರು: ಹಿಂದೂ ಮುಖಂಡರೊಬ್ಬರ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ಇಬ್ಬರು ವಿಚಾರಣಾಧೀನ ಕೈದಿಗಳ ಮೇಲೆ ಪ್ರತಿಕಾರಕ್ಕಾಗಿ ಹಲ್ಲೆ ನಡೆಸಲು ಹೊರಗಿನಿಂದ ಮಾರಕಾಸ್ತ್ರ ರವಾನೆಯಾಗಿದೆ ಎಂಬ ಮಾಹಿತಿ ಮೇರೆಗೆ ಇಲ್ಲಿನ ಉಪ ಕಾರಾಗೃಹಕ್ಕೆ ಬುಧವಾರ ದಾಳಿ ನಡೆಸಿದ ಪೊಲೀಸರು ತೀವ್ರ ತಪಾಸಣೆ ನಡೆಸಿದರು.

ಎಸಿಪಿ ರವಿಂದ್ರ ಗಡಾದಿ ಹಾಗೂ ಇನ್‌ಸ್ಪೆಕ್ಟರ್ ವಿನಯ್ ಗಾಂವಕರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಕಾರಾಗೃಹದಲ್ಲಿ ಷೇವಿಂಗ್ ಬ್ಲೇಡ್, ಕತ್ತರಿ, 40 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ ಚಾರ್ಜರ್, ಲೈಟರ್, ಸೊಳ್ಳೆ ನಿವಾರಕ ಬತ್ತಿ ಮತ್ತು ನೈಲ್ ಕಟ್ಟರ್ ವಶಪಡಿಸಿಕೊಳ್ಳಲಾಯಿತು.
ಬಂದರು ಪ್ರದೇಶದಲ್ಲಿ 2008ರಲ್ಲಿ ನಡೆದಿದ್ದ ಹಿಂದೂ ಮುಖಂಡರ ಕೊಲೆ ಆರೋಪಿಗಳಾದ, ಇಬ್ಬರು ಯುವಕರ ಮೇಲೆ ದಾಳಿ ನಡೆಸಲು ಜೈಲಿನೊಳಗಿರುವ ಕೆಲವರಿಗೆ ಸುಪಾರಿ ನೀಡಲಾಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ಕಳೆದ ಶನಿವಾರ ಜೈಲಿನ ಆವರಣದ ಗೋಡೆಯಾಚೆಯಿಂದಲೇ ಚೂರಿ, ಮಚ್ಚು ಸೇರಿದಂತೆ ಮಾರಕಾಸ್ತ್ರ ಒಳಗೆ ಎಸೆಯಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದರು.

ಸಂಜೆ 4ಕ್ಕೆ ಆರಂಭವಾದ ತಪಾಸಣಾ ಕಾರ್ಯ 7ಗಂಟೆ ವರೆಗೂ ನಡೆಯಿತು. ಜೈಲಿನ ಆವರಣ, ಕೈದಿಗಳ ಸೆಲ್‌ಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಮಾರಕಾಸ್ತ್ರಗಳು ದೊರೆಯಲಿಲ್ಲ. ಆದರೆ, 3 ಗಂಟೆಗಳ ಸುದೀರ್ಘ ಹುಡುಕಾಟದ ಫಲವಾಗಿ ಜೈಲಿನೊಳಗೆ ಅನಪೇಕ್ಷಿತ ವಸ್ತುಗಳು ಪತ್ತೆಯಾದವು.

ವಾರದ ಹಿಂದಷ್ಟೇ ಉಪ ಕಾರಾಗೃಹಕ್ಕೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದ ಪೊಲೀಸರು, ಮತ್ತೆ ದಾಳಿ ನಡೆಸಿದಾಗಲೂ ಗಾಂಜಾ ಪತ್ತೆಯಾಗಿದ್ದು ವಿಶೇಷ. ಈ ಬಗ್ಗೆ ಜೈಲು ಸಿಬ್ಬಂದಿಯೂ ಅಚ್ಚರಿ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, `ಇದೊಂದು ಮಾಮೂಲಿಯಂತೆ ನಡೆಸುವ ನಿಗದಿತ ದಾಳಿ~ ಎಂದು ಚುಟುಕಾಗಿ ಪ್ರತಿಕ್ರಿಯಿದರು. ಜೈಲಿನೊಳಗೆ ಮಾರಕಾಸ್ತ್ರ ರವಾನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.