ADVERTISEMENT

ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:10 IST
Last Updated 16 ಅಕ್ಟೋಬರ್ 2012, 19:10 IST

ಮಡಿಕೇರಿ: ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು.

ಇಲ್ಲಿನ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಗೌಳಿಬೀದಿಯ ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಸ್ಥಾನಗಳ ಅಲಂಕೃತಗೊಂಡ ಕರಗಗಳಿಗೆ ದಶಮಂಟಪಗಳ ಸಮಿತಿ, ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಪೂಜೆ ಸಲ್ಲಿಸಲಾಯಿತು.

ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಎದುರು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಕರಗಗಳಿಗೆ ಪೂಜೆ ಸಲ್ಲಿಸಿ, ದಸರಾ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಕರಗಗಳು ಬನ್ನಿಮಂಟಪಕ್ಕೆ ತೆರಳಿದವು. ಅಲ್ಲಿ ನಗರಸಭೆ ವತಿಯಿಂದ ಪೂಜೆಯಾದ ನಂತರ ಚೌಡೇಶ್ವರಿ ಹಾಗೂ ಪೇಟೆ ರಾಮಮಂದಿರ ದೇವಸ್ಥಾನಕ್ಕೆ ಕರಗಗಳು ಆಗಮಿಸಿದವು. ಇಲ್ಲಿ ಪೂಜೆಯಾದ ನಂತರ ಕರಗಗಳು ತಮ್ಮ ಸ್ವದೇವಸ್ಥಾನಗಳಿಗೆ ಹಿಂತಿರುಗಿದವು.

ಕರಗಗಳ ಪ್ರದಕ್ಷಿಣೆ:
ನಗರದ ಸುಭಿಕ್ಷೆಗಾಗಿ ಈ ಕರಗಗಳು ಬುಧವಾರದಿಂದ ಮನೆ ಮನೆಗೆ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸಲಿವೆ. ನವರಾತ್ರಿ ಮುಗಿಯುವವರೆಗೆ ಪ್ರತಿಯೊಂದು ಕರಗಗಳು ನಿಗದಿತ ಬಡಾವಣೆಗಳಲ್ಲಿ ಸಂಚರಿಸಲಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ: ಕರಗಗಳಿಗೆ ಪೂಜೆ ಸಲ್ಲಿಸಿದ ನಂತರ ಕಾವೇರಿ ಕಲಾಕ್ಷೇತ್ರದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.  ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.