ಮಂಗಳೂರು: ಮೂಡಿಗೆರೆ ತಾಲ್ಳೂಕಿನ ಗೋಣಿಬೀಡು ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಲವೆಡೆ ಎಂಆರ್‌ಪಿಎಲ್ ಪೈಪ್‌ಲೈನ್‌ಗೇ ಕನ್ನ ಕೊರೆದು ತೈಲ ಕಳವು ಮಾಡಿದ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಚಿಕ್ಕಮಗಳೂರು ಪೊಲೀಸರು, ಮತ್ತೆ 8 ಮಂದಿಯನ್ನು ಬಂಧಿಸಿದ್ದಾರೆ. ಈವರೆಗೆ ಈ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿದೆ.
ತೈಲ ಕಳವು ಜಾಲದ ನಾಗೇಶ್, ಮದನ್ ಕುಮಾರ್, ವಿಜಯ ಕುಮಾರ್, ರಮೇಶ್, ಮಂಜುನಾಥ, ಕಾಂತರಾಜ್, ಮನೋಜ್, ಸುರೇಶ್, ನಾಗರಾಜ್ ಹಾಗೂ ನೂತನ್ ಕುಮಾರ್ ಬಂಧಿತರು. ಆರೋಪಿಗಳು ಹಾಸನ ಜಿಲ್ಲೆಯ ಆಲೂರು, ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನವರು.
ಪೆಟ್ರೋಲ್, ಡೀಸೆಲ್ ಕಳವು ಬೃಹತ್ ಜಾಲದ ತನಿಖೆಗೆಂದೇ ನೇಮಕಗೊಂಡಿರುವ ಡಿವೈಎಸ್‌ಪಿ ವೇದಮೂರ್ತಿ, ಸಬ್ ಇನ್‌ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ವಿಶೇಷ ತಂಡ ಕಳೆದ ಬುಧವಾರ ಮೂವರನ್ನು ಬಂಧಿಸಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಗುರುವಾರ ಹಾಗೂ ಶುಕ್ರವಾರ ಕಾರ್ಯಾಚರಣೆ ನಡೆಸಿ 8 ಮಂದಿಯನ್ನು ಸೆರೆ ಹಿಡಿದಿದೆ.
ಸೂತ್ರಧಾರ ರಾಜು ಶೆಟ್ಟಿ: ಭಾರಿ ತೈಲ ಕಳವು ಜಾಲದ ಸೂತ್ರಧಾರ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಅರೇಹಳ್ಳಿಯ ರಾಜು ಶೆಟ್ಟಿ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕಾಗಿ ವಿಶೇಷ ತಂಡ ಶ್ರಮಿಸುತ್ತಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರಜಾವಾಣಿ ಜತೆ ಶುಕ್ರವಾರ ಮಾತನಾಡಿದ ಡಿವೈಎಸ್‌ಪಿ ವೇದಮೂರ್ತಿ ರಾಜು ಶೆಟ್ಟಿಯನ್ನು ಶೀಘ್ರವೇ ಬಂಧಿಸಲಾಗುವುದು.ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರವಿರುವ ಬಗ್ಗೆ ಹಾಗೂ ಎಂಆರ್‌ಪಿಎಲ್ ಅಧಿಕಾರಿಗಳು ಶಾಮೀಲಾಗಿರುವ ಕುರಿತೂ ತನಿಖೆ ನಡೆಸಲಾಗುತ್ತಿದೆ. ತನಿಖೆ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಳವಾಗಿರುವ ತೈಲ ಪ್ರಮಾಣ ಹಾಗೂ ಕನ್ನ ಕೊರೆಯಲು ಬಳಸಿದ ಸಾಧನ-ತಂತ್ರಜ್ಞಾನ ಕುರಿತು ಹೆಚ್ಚಿನ ತನಿಖೆ ನಡೆಸಲು ತಜ್ಞರ ನೆರವು ನೀಡುವಂತೆ ಎಂಆರ್‌ಪಿಎಲ್ ಮಂಗಳೂರು ಕಚೇರಿಯನ್ನು ಕೋರಲಾಗಿದೆ. ಪೂರಕ ಪ್ರತಿಕ್ರಿಯೆ ದೊರೆತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.