ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವದ ಅಂಗವಾಗಿ ಬುಧವಾರ ಗ್ರಾಮದ ಮೇಗೋಟೆ ದುರ್ಗಾದೇವಿ ದೇವಸ್ಥಾನದಿಂದ ಪ್ರೌಢ ದೇವರಾಯ ವೇದಿಕೆ ವರೆಗೆ ನಡೆದ ಜಾನಪದ ಕಲಾವಾಹಿನಿ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಮಧ್ಯಾಹ್ನ 12ಕ್ಕೆ ಸರಿಯಾಗಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಕಲಾವಾಹಿನಿಗೆ ಚಾಲನೆ ನೀಡಿದರು. ಬಳಿಕ ಆನೆ ಮೇಲೆ ಅಂಬಾರಿಯಲ್ಲಿ ದುರ್ಗಾದೇವಿಯ ಮೆರವಣಿಗೆ ನಡೆಸಲಾಯಿತು.ಸಾಗರದ ಅರ್ಚನಾ ತಂಡದವರ ಮಹಿಳಾ ಡೊಳ್ಳು, ಜಗಳೂರಿನ ಲಿಂಬ್ಡಿಬಾಯಿ ತಂಡದ ಸಂಪ್ರಾದಾಯಿಕ ಲಮಾಣಿ ನೃತ್ಯ, ದಂಡಿನಶಿರವಾರದ ಗಂಗಾಧರ ಗೌಡ ತಂಡದ ಸೋಮನ ಕುಣಿತ ಹಾಗೂ ಮರಿಯಮ್ಮನಹಳ್ಳಿಯ ಮಂಜವ್ವ ತಂಡದ ಜೋಗುತಿ ಕುಣಿತ ಆಕರ್ಷಿಸಿದವು.
ಸಿದ್ದಾಪುರದ ಹಗಲು ವೇಷಗಾರರ ರಾಮಾಯಣ ಕಥಾ ಪ್ರಸಂಗ, ಕಿನ್ನಾಳದ ಕಾಶಿ ವಿಶ್ವನಾಥ ತಂಡದ ಕರಡಿ ಮಜಲು, ವೀರಯ್ಯ ಸಂಶಿಮಠ ಹಾಗೂ ತಂಡದ ವೀರಗಾಸೆ, ಶ್ರೀರಂಗಪಟ್ಟಣದ ಕೊಡಿಯಾಲ ಸಿದ್ದೇಗೌಡ ತಂಡದ ಪಟ ಕುಣಿತದ ಕಲಾ ಪ್ರಕಾರಗಳು ಕಲಾ ವಾಹಿನಿಯಲ್ಲಿ ಪಾಲ್ಗೊಂಡಿದ್ದವು.
ಡೊಳ್ಳು ಕುಣಿತ, ವೀರಭದ್ರ ಕುಣಿತ, ಗಾರುಡಿ ಬೊಂಬೆ, ಕಂಸಾಳೆ, ಸಾಂಬಾಳ ವಾದನ, ತಮಟೆ ವಾದನ, ತಾಷಾ ರಂಡೋಲ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಮಹಿಳೆಯ ಭಜನಾ ತಂಡ ಸೇರಿದಂತೆ ಇತರ ತಂಡಗಳು ಉತ್ತಮ ಪ್ರದರ್ಶನ ನೀಡಿದವು.
ಸಚಿವರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಸದಸ್ಯೆ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.