ADVERTISEMENT

ಮನೆಗೆ ನುಗ್ಗಿ ರೂ 1.5 ಲಕ್ಷ ಬೆಲೆಯ ನಗ ನಾಣ್ಯ ಕಳವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:45 IST
Last Updated 1 ಜೂನ್ 2011, 18:45 IST

ಚನ್ನರಾಯಪಟ್ಟಣ: ಹಿಂಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ 82 ಗ್ರಾಂ ಚಿನ್ನಾಭರಣ, ರೂ.15 ಸಾವಿರ ನಗದು ಸೇರಿ  ರೂ.1.50 ಲಕ್ಷ  ಮೌಲ್ಯದ ನಗ, ನಾಣ್ಯ ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ಶ್ರವಣೇರಿಯಲ್ಲಿ ನಡೆದಿದೆ.

ಗ್ರಾಮದ ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿದೆ. ಕೊಟ್ಟಿಗೆ ಮನೆಯ ಚಿಲಕವನ್ನು ತೆಗೆದು ಅಡುಗೆ ಕೋಣೆಯ ಮೂಲಕ ಒಳಗೆ ಪ್ರವೇಶಿಸಿರುವ ಕಳ್ಳರು, ಟಿ.ವಿ. ಸ್ಟ್ಯಾಂಡ್ ಮೇಲೆ ಇಟ್ಟಿದ್ದ ಬೀರುವಿನ ಕೀಲಿಯನ್ನು ತೆಗೆದುಕೊಂಡು ಬೀರುವಿನ ಬೀಗ ತೆರೆದು ಚಿನ್ನಾಭರಣ, ಹಣಕಳವು ಮಾಡಿದ್ದಾರೆ. ಮನೆಯ ಹಿಂದೆ ಇರುವ ತೆಂಗಿನಮರದ ಬಳಿ ಮಚ್ಚು, ಆಭರಣದ ಬಾಕ್ಸ್ ಬಿಸಾಡಿದ್ದಾರೆ.

ಕಳ್ಳತನ ನಡೆದಾಗ ವೆಂಕಟೇಶ್  ಸೇರಿದಂತೆ ಕುಟುಂಬದ ಐವರು  ಮನೆಯಲ್ಲಿ ಮಲಗಿದ್ದರೂ ಯಾರಿಗೂ ಗೊತ್ತಾಗಲಿಲ್ಲ. ಬುಧವಾರ ಬೆಳಿಗ್ಗೆ ವೆಂಕಟೇಶ್ ಬಹಿರ್ದೆಸೆಗೆ ಹೋಗಿ ವಾಪಸ್ ಬಂದು ನೋಡಿದಾಗ ಬೀರುವಿನ  ಬಾಗಿಲ ತೆರೆದಿರುವುದು ಕಂಡುಬಂದು ಪರಿಶೀಲಿಸಿದಾಗ ಕಳ್ಳತನ ನಡೆದದ್ದು ಗೊತ್ತಾಗಿದೆ.

`ಪತ್ನಿ ಅನಾರೋಗ್ಯದಿಂದ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬುಧವಾರ ಆಸ್ಪತ್ರೆಗೆ ಹಣ ಕಟ್ಟಲು 15 ಸಾವಿರ  ನಗದು ತಂದಿಟ್ಟಿದ್ದೆ. ಅಷ್ಟರಲ್ಲಿ ಕಳ್ಳತನವಾಗಿದೆ ಎಂದು ವೆಂಕಟೇಶ್ ಅಳಲು ತೋಡಿಕೊಂಡರು.

ಗ್ರಾಮದ ಇತರ 3 ಮನೆಗಳ ಹಿಂಬಾಗಿಲಿನ ಚಿಲಕ ತೆಗೆಯಲು ಕಳ್ಳರು, ಯತ್ನಿಸಿದ್ದರಾದರೂ ಅದು ಸಫಲವಾಗಿಲ್ಲ. ಮನೆ ಪ್ರವೇಶಿಸುವ  ಮುನ್ನ ನಿಂಬೆಹಣ್ಣು ಕತ್ತರಿಸಿ ಬಾಗಿಲ ಬಳಿ ಇಟ್ಟಿದ್ದಾರೆ.  ಬುವಾರ  ಬೆರಳಚ್ಚು ತಜ್ಞರು, ಶ್ವಾನದಳದವರು ಭೇಟಿ ನೀಡಿ ಪರಿಶೀಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.