ADVERTISEMENT

ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಘಟಪ್ರಭಾ (ಗೋಕಾಕ): `ಅಧ್ಯಾತ್ಮ ಪರಂಪರೆಯನ್ನು ಹೊಂದಿರುವ ಕೇಂದ್ರಗಳೇ ಮಠಗಳು~ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರ ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಮಹೋತ್ಸವದ ಶೂನ್ಯ ಸಿಂಹಾಸನಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

`ಕರ್ನಾಟಕದ ಮಠಗಳು ಶ್ರೇಷ್ಠ ಐತಿಹಾಸಿಕ ಹಿನ್ನೆಲೆ ಹೊಂದಿವೆ. ಎಲ್ಲರಿಗೂ ಶಿವಸ್ವರೂಪದ ದೀಕ್ಷೆ ಕೊಟ್ಟು, ಅವರು  ಯಾವಾಗಲೂ ಸನ್ಮಾರ್ಗದಲ್ಲಿ ನಡೆಯಬೇಕು ಮತ್ತು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂಬುದೇ ಮಠಗಳ ಉದ್ದೇಶ. ಇಂತಹ ಮಠಗಳ ಅಧಿಪತ್ಯ ಹೊಂದಿದವರಿಗೆ ಜಂಗಮ, ಚರಮೂರ್ತಿಗಳು, ಪೀಠಾಧಿಪತಿಗಳೆಂದು ಕರೆಯುವುದು ರೂಢಿಯಲ್ಲಿದೆ~ಎಂದರು.

`ಮಹಾ ತಪಸ್ವಿಗಳಾದ ವಿಜಯ ಮಹಾಂತ ಶಿವಯೋಗಿಗಳು, ಲಿಂಗೈಕ್ಯ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳು ಸಹ ಅರಸಿಕೇರೆ ತಾಲ್ಲೂಕಿನ ಶಶಿವಾಳ ಗ್ರಾಮದವರು. ಗುಬ್ಬಲಗುಡ್ಡ ಮಠಕ್ಕೆ ಪಟ್ಟಾಧಿಕಾರಿಯಾದ ಮಲ್ಲಿಕಾರ್ಜುನ ಸ್ವಾಮೀಜಿ ಕೂಡಾ ಶಶಿವಾಳ ಗ್ರಾಮದವರು ಎಂಬುದು ಹೆಮ್ಮೆಯ ವಿಷಯ. ಅವರು ಈ ಭಾಗದ ಜನರಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ~ ಎಂದು ಹೇಳಿದರು.

ಬೆಳಗಾವಿ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರಗೋಡದ ನೀಲಕಂಠ  ಸ್ವಾಮೀಜಿ ನೇತೃತ್ವ ವಹಿಸಿದ್ದರು.
 
ಹುಬ್ಬಳ್ಳಿಯ ಸಿದ್ಧಲಿಂಗ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ, ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ನವಲಗುಂದ ಬಸವಲಿಂಗ ಸ್ವಾಮೀಜಿ, ಮಾಜಿ ಸಚಿವರಾದ ಎ.ಬಿ. ಪಾಟೀಲ, ಪಿ.ಸಿ. ಸಿದ್ಧನಗೌಡ, ಅಶೋಕ ಪೂಜೇರಿ, ಜೆ.ಜಿ. ಸಹಕಾರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಬಿ.ಆರ್. ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.