ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಪಟ್ಟಣದ ಗಾಂಧಿನಗರದಲ್ಲಿರುವ ಮಾರಮ್ಮನ ಗುಡಿ ರಸ್ತೆಯ ಸಂಜೀವಪ್ಪ ಎಂಬುವವರ ಮನೆಯಲ್ಲಿ ಬುಧವಾರ ತಡರಾತ್ರಿ ಕಾರ್ಮಿಕರು ಗುಂಡಿಯಲ್ಲಿದ್ದ ಮಲವನ್ನು ತಲೆ ಮೇಲೆ ಹೊತ್ತು ಸ್ವಚ್ಛಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದ ಈ ಕಾರ್ಮಿಕರಿಂದ ಸಂಜೀವಪ್ಪ ಮನೆಯ ಕಕ್ಕಸ್ಸು ಗುಂಡಿಯಲ್ಲಿದ್ದ ಮಲವನ್ನು ರಾತ್ರಿ ಸಮಯದಲ್ಲಿ ತೆಗೆಸುತ್ತಿದ್ದರು. ಮಲ ತೆಗೆಯುವ ಮತ್ತು ಹೊರುತ್ತಿದ್ದ ದೃಶ್ಯಗಳನ್ನು ಕಂಡ ಯುವಕರಿಬ್ಬರು ಫೋಟೋ ತೆಗೆಸಿದ್ದಾರೆ. ಇವು `ಪ್ರಜಾವಾಣಿ~ಗೆ ಲಭಿಸಿವೆ.
ಈ ಯುವಕರು ಗುರುವಾರ ಮಧ್ಯಾಹ್ನ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಛಾಯಾಚಿತ್ರಗಳ ಸಮೇತ ಮನವಿ ಮಾಡಿದರು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿಪುಲ್ ಬನ್ಸಾಲ್ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಬಿ. ರಾಮಪ್ಪ ಅವರಿಗೆ ಸೂಚಿಸಿದರು.
ಅದರಂತೆ ಸಂಜೀವಪ್ಪ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಲಾಗಿದೆ ಎಂದು ರಾಮಪ್ಪ ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.