ADVERTISEMENT

ಮಳವಳ್ಳಿ: ಕನ್ನಡದ ತೇರಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಮಳವಳ್ಳಿ: ಬೆಳಗಾವಿಯಲ್ಲಿ ಮಾರ್ಚ್ 11 ರಿಂದ 13ರ ವರಗೆ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ  ಮಂಡ್ಯ ಜಿಲ್ಲೆಯಿಂದ ತೆರಳುತ್ತಿರುವ ವಿಶ್ವ ಕನ್ನಡ ತೇರನ್ನು ತಾಲ್ಲೂಕಿನ ಗಡಿಭಾಗವಾದ ಕಾಳಕೆಂಪನದೊಡ್ಡಿ ಬಳಿ ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ತಹಶೀಲ್ದಾರ್ ಬಿ.ವಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ  ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕೂರು, ಕನ್ನಡಪರ ಸಂಘಟನೆಗಳು, ಕನ್ನಡ  ಅಭಿಮಾನಿಗಳು, ತಾಲ್ಲೂಕು ಮಟ್ಟದ ಅಭಿಮಾನಿಗಳು ಕನ್ನಡ ತೇರನ್ನು ಬರಮಾಡಿಕೊಂಡರು.

ಮಧ್ಯಾಹ್ನ 12 ಗಂಟೆಗೆ ತೇರು ಬರುವ ಸಮಯ ನಿಗದಿಯಾಗಿದ್ದರೂ 2 ಗಂಟೆ ತಡವಾಗಿ ಆಗಮಿಸಿತು.  ಬಿಸಿಲಿನ ತಾಪವನ್ನು ಲೆಕ್ಕಿಸದ ಕನ್ನಡಾಭಿಮಾನಿಗಳು ತೇರು ಬರುವಿಕೆಯನ್ನು ಕಾಯ್ದುಕುಳಿತ್ತಿದ್ದರು. ಮಧ್ಯಾಹ್ನ  2 ಗಂಟೆಗೆ ಗಡಿ ಭಾಗ ಕಾಳಕೆಂಪನದೊಡ್ಡಿ ಗೇಟ್ ಬಳಿ ತೇರು ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸ್ವಾಗತಿಸಿದರು. ಪೂಜಾ ಕುಣಿತ, ಸಿಂಗರಿಸಿದ ಎತ್ತಿನಗಾಡಿಗಳು ತಮಟೆ ವಾದ್ಯಗಳು ಸಂಭ್ರಮಕ್ಕೆ ಮೆರುಗು ನೀಡಿದವು.

ತೇರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪುರಸಭೆ ಆಡಳಿತ ಸ್ವಾಗತ ಕೋರಿತು. ಬಳಿಕ ತೇರು ಮದ್ದೂರು ರಸ್ತೆ, ಮೈಸೂರು ರಸ್ತೆಯ ಮೂಲಕ ಹಾದು ರಾಗಿಬೊಮ್ಮನಹಳ್ಳಿ, ಕಿರುಗಾವಲು, ಚಿಕ್ಕಮುಲಗೂಡು ಮೂಲಕ ತೆರಳಿ ಮಂಡ್ಯಕ್ಕೆ ತೆರಳಿತು. ಇದಕ್ಕಾಗಿ ಪುರಸಭೆ ರಸ್ತೆಗಳನ್ನು ಸ್ವಚ್ಛಗೊಳಿಸಿ ರಸ್ತೆಯ ಎರಡು ಬದಿ ತಳಿರು ತೋರಣಗಳನ್ನು ಕಟ್ಟಿ ಹಬ್ಬದ ವಾತವಾರಣ ಸೃಷ್ಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.