ADVERTISEMENT

ಮಾಗಡಿ: ಇಂದು ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:30 IST
Last Updated 9 ಫೆಬ್ರುವರಿ 2011, 19:30 IST

ಮಾಗಡಿ: ಇತಿಹಾಸ ಪ್ರಸಿದ್ಧ ಮಾಗಡಿಯ ಐಸಿರಿ ಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ನಡೆಯಲಿದೆ. ಒಂದೆಡೆ ಹುಲಿಯೂರು ದುರ್ಗದ ಕಡೆಗೆ ಚಲಿಸುವ ರಸ್ತೆ. ಮತ್ತೊಂದೆಡೆ ವಿಶಾಲವಾದ ಬೆಟ್ಟಗುಡ್ಡಗಳು. ಇನ್ನೊಂದೆಡೆಗೆ ಹೊಸಹಳ್ಳಿ ಕೆರೆಯಿಂದ ಹಾರಿ ಬರುವ ಬೆಳ್ಳಕ್ಕಿಗಳು.. ಇವುಗಳ ನಡುವೆ ಪುರಾಣದ ಕಥೆ ಮತ್ತು ಬೆಂಗಳೂರು ಇತಿಹಾಸದ ಮೈಲಿಗಲ್ಲು. ಇವೆಲ್ಲದರ ನಡುವೆ ಇದೆ ಮಾಗಡಿ ಸೋಮೇಶ್ವರ ದೇಗುಲ. ಈ ದೇವಾಲಯದಲ್ಲಿರುವ ಅದ್ಬುತ ಶಿಲ್ಪಕಲಾಕೃತಿಗಳು. ಇಂಥ ಸೌಂದರ್ಯ ಕೋಪಿಷ್ಠ ಮನಸ್ಸನ್ನು ಶಾಂತಚಿತ್ತರನ್ನಾಗಿಸುತ್ತದೆ.ವಿಜಯನಗರ ಸಾಮ್ರಾಜ್ಯದ ಗಡಿಯಾಗಿದ್ದ ಮಹಾಗಡಿಯೇ ಮಾಗಡಿ. ಈ ಮಾಗಡಿಯಲ್ಲಿ ಕ್ರಿ.ಶ. 1712ರಲ್ಲಿ ಇಮ್ಮಡಿ ಕೆಂಪೇಗೌಡರು ಈ ದೇವಾಲಯವನ್ನು ನಿರ್ಮಿಸಿದರು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಮಾಂಡವ್ಯ ಮುನಿಗಳ ತಪೋಭೂಮಿ ಮಾಗಡಿ. ಮಾ- ಎಂದರೆ ಲಕ್ಷ್ಮಿ, ಗಡಿ- ಎಂದರೆ ನಿವಾಸ. ಹೀಗಾಗಿ ಲಕ್ಷ್ಮಿ ವಾಸಿಸುವ ಸ್ಥಳ ಮಾಗಡಿಯಾಗಿದೆ ಎಂದು ಪುರಾತನ ಕಾಲದಿಂದಲೂ ಮಾಗಡಿಯಲ್ಲಿ ಬಾಳಿ ಬದುಕಿದ್ದ ಬ್ರಾಹ್ಮಣ ಪಂಡಿತರು ತಮ್ಮ ಸಂಸ್ಕೃತ ಗ್ರಂಥಗಳಲ್ಲಿ ವರ್ಣಿಸಿದ್ದಾರೆ.  ದೇವಾಲಯದ ಗರ್ಭಗುಡಿ  ಶಿವಲಿಂಗದ ಹಿಂದಿರುವ ಶಿಲಾ ಶಾಸನದಲ್ಲೂ ಈ ಮಾಹಿತಿಯಿದೆ.ಶರಣ ಗಗನಧಾರ್ಯನ ಪ್ರೇರಣೆಯಿಂದಾಗಿ ಇಮ್ಮಡಿ ಕೆಂಪೇಗೌಡರು ಗವಿಗಂಗಾಧರೇಶ್ವರ,  ಕೋಟೆ ರಾಮೇಶ್ವರ, ಕಾಶಿವಿಶ್ವೇಶ್ವರ, ಪ್ರಸನ್ನರಾಮೇಶ್ವರ, ಕೋಡಿ ಮಲ್ಲೇಶ್ವರ, ಸೋಮೇಶ್ವರ, ಸಾತನೂರಿನ ಈಶ್ವರ ದೇವಾಲಯಗಳನ್ನು ನಿರ್ಮಿಸಿರುವ ಕುರಿತು ಚಾರಿತ್ರಿಕ ದಾಖಲೆಗಳಿವೆ.

ಸೋಮೇಶ್ವರ ದೇವಾಲಯದ ಪೌಳಿಯೊಳಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕೆಂಪೇಗೌಡರ ಹಜಾರಗಳಿವೆ. ಪರಶುರಾಮ, ಸತ್ಯನಾರಾಯಣಸ್ವಾಮಿ, ಅಮ್ಮನವರ ದೇಗುಲಗಳಿವೆ. ಹಂಪೆಯಲ್ಲಿನ ವಿರೂಪಾಕ್ಷ ದೇಗುಲದ ಮುಂದೆ ಇರುವಂತಹ ನೃತ್ಯ ಮಂಟಪವಿದೆ. ಪೌಳಿ ಗೋಡೆಯ ನಾಲ್ಕು ದಿಕ್ಕಿನಲ್ಲಿ ಮತ್ತು ಹಜಾರದ ಮೇಲೆ ಚಿತ್ರಾಲಂಕೃತ ಗೋಪುರಗಳಿವೆ. ಒರಟು ಕಲ್ಲಿನಲ್ಲೂ ಶಿಲ್ಪಿ ಚತುರತೆಯಿಂದ ಚಿತ್ರಿಸಿದ್ದಾನೆ.

ಆಡಳಿತ:
ಇಮ್ಮಡಿ ಕೆಂಪೇಗೌಡರು ಕೃಷಿಯಾಧಾರಿತ ಚಟುವಟಿಕೆಗಳ ಜೊತೆಗೆ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳಿಗೆ ಉದಾರ ದೇಣಿಗೆ ನೀಡುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ಸೋಮೇಶ್ವರ ಸ್ವಾಮಿ ದೇಗುಲದ ಭಿತ್ತಿ ಚಿತ್ರಗಳಲ್ಲಿ ಆ ಕುರುಹುಗಳಿವೆ.‘ಬೆಟ್ಟದ ಕೆಳಗೆ ಕಲಾತ್ಮಕವಾಗಿರುವ ಕಲ್ಯಾಣಿ ಶಿಥಿಲವಾಗಿದೆ. ಜಾತ್ರಾ ಸಮಯದಲ್ಲಿ ಇದೇ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದಾಗ ಉತ್ಸವ ಮೂರ್ತಿ ಮುಳುಗಿ ಅನಾಹುತವಾಗಿತ್ತು. ಆಗಿನಿಂದ ರಾಸುಗಳ ಜಾತ್ರೆ ನಿಲ್ಲಿಸಲಾಗಿದೆ’ ಎಂದು ಕೀರ್ತಿಶೇಷಕಲ್ಯ ಶ್ರೀನಿವಾಸ್ ರಾವ್ ನೆನಪಿಸಿಕೊಳ್ಳುತ್ತಿದ್ದರು.ತಗ್ಗಿಕುಪ್ಪೆ ಗ್ರಾಮದ ಬಳಿ ಸೋಮೇಶ್ವರ ಸ್ವಾಮಿಗೆ ದೇವಾಲಯಕ್ಕೆ ಸೇರಿದ್ದ ನೂರಾರು ಎಕರೆಯಿದ್ದ ಭೂಮಿ ಉಳ್ಳವರ ಪಾಲಾಯಿತು ಎಂದು ಜೋಡಿದಾರ್ ಶ್ರೀನಿವಾಸ ಅಯ್ಯಂಗಾರ್ ನೊಂದು ನುಡಿಯುತ್ತಾರೆ.

ಕಲಾತ್ಮಕವಾಗಿದ್ದ ರಾಯಗೋಪುರ 1965ರಲ್ಲಿ ಸಿಡಿಲ ಹೊಡೆತಕ್ಕೆ ಸಿಕ್ಕಿ ಶಿಥಿಲವಾಗಿತ್ತು. ದಿವಂಗತ ಜವರಪ್ಪ ಹಾಗೂ ಲಕ್ಕೇಗೌಡ ಗೋಪುರದ ದುರಸ್ತಿಗೆ ವಂತಿಗೆ ಸಂಗ್ರಹಿಸಿದ್ದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಭಕ್ತರು ಗೋಪುರ ದುರಸ್ಥಿಗೆ ಯತ್ನಿಸಿದ್ದರು. ಅಂದಿನ ಸಂಸದೆ ತೇಜಸ್ವಿನಿ ರಮೇಶ್ ಕೂಡ ಸ್ವಲ್ಪ ಅನುದಾನ ಬಿಡುಗಡೆ ಮಾಡಿಸಿ, ಕಾಮಗಾರಿ ನಡೆಯಲು ಕಾರಣರಾಗಿದ್ದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ, ಶಾಸಕ ಎಚ್.ಸಿ.ಬಾಲಕೃಷ್ಣ ಸ್ಥಳೀಯ ಇತಿಹಾಸ ಪ್ರೇಮಿಗಳ ಒತ್ತಾಸೆಗೆ ಮಣಿದು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ಬೆನ್ನತ್ತಿ ಶಿಥಿಲ ಗೋಪುರವನ್ನು ಜೀರ್ಣೋದ್ದಾರ ಮಾಡಿಸಿದ್ದರು.  ಜಾತ್ರೆಯ ಅಂಗವಾಗಿ ದೇವಾಲಯದ ಸುತ್ತ ರಸ್ತೆಗೆ  ಡಾಂಬರೀಕರಣ ಮಾಡಲಾಗಿದೆ. ದೇವಾಲಯದ ಸುತ್ತ ಭೂಮಿ ಒತ್ತುವರಿಯಾಗದಂತೆ ಮುಂದಿನ ಪೀಳಿಗೆಗೆ ಎಲ್ಲರೂ ಸೇರಿ ಎಚ್ಚರವಹಿಸಬೇಕಾಗಿದೆ ಎಂಬುದು ನೂರಾರು ಭಕ್ತರ ಆಶಯವಾಗಿದೆ. ದೇವಾಲಯದ ದಕ್ಷಿಣದಲ್ಲಿರುವ ಕೆಂಪೇಗೌಡರ ಗೋಪುರ ಮತ್ತು ಶಿಲ್ಪಿ ಮುನಿಯಾಭೋವಿಯವರ ಗದ್ದುಗೆಗಳನ್ನು ದುರಸ್ಥಿಗೊಳಿಸಬೇಕಿದೆ. ಇಂಥ ಐತಿಹಾಸಿಕ ಹಿನ್ನೆಲೆಯಿರುವ ಸೋಮೇಶ್ವರ ಜಾತ್ರೆಗೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ದೇವಾಲಯ ಸಮಿತಿಯವರು ಮನವಿ ಮಾಡಿದ್ದಾರೆ.

ದೇವಾಲಯಕ್ಕೆ ಮಾರ್ಗ:
ಮಾಗಡಿಯಿಂದ ಪಶ್ಚಿಮಕ್ಕೆ ಬಿ.ಕೆ.ರಸ್ತೆಯಲ್ಲಿ 2 ಕಿ.ಮೀ ಚಲಿಸಿದರೆ ರಸ್ತೆಯ ಎಡಬದಿಯಲ್ಲಿರುವುದೇ ಸೋಮೇಶ್ವರ ದೇವಾಲಯ.
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.