ADVERTISEMENT

ಮೂಲ ಸೌಕರ್ಯ ಕಲ್ಪಿಸಲು ಉದ್ಯಮಿಗಳ ಅಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಮದ್ದೂರು: ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಸ್ಥಳೀಯ ಕೈಗಾರಿಕೋದ್ಯಮಿಗಳು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರನ್ನು ಗುರುವಾರ ಆಗ್ರಹಿಸಿದರು.ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಮೂಲ ಸೌಕರ್ಯಗಳ ಕುರಿತು ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.

ಕೈಗಾರಿಕಾ ಪ್ರದೇಶಕ್ಕೆ ತಿರುವು ತೆಗೆದುಕೊಳ್ಳಲು ರಸ್ತೆ ವಿಭಜಕ ತೆರವುಗೊಳಿಸಬೇಕು.ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು, ಬಸ್ ತಂಗುದಾಣ ನಿರ್ಮಿಸಲು ಕೂಡಲೇ ಕ್ರಮ ಜರುಗಿಸಬೇಕು. ಸ್ಮಶಾನವನ್ನು ತೆರವುಗೊಳಿಸಿ ಅದಕ್ಕೆ ಬದಲಿ ಸ್ಥಳಾವಕಾಶ ಕಲ್ಪಿಸಬೇಕು ಎಂದು ಮುಖಂಡರಾದ ಡಾಬಾ ಕಿಟ್ಟಿ, ಕೆ.ಕೃಷ್ಣ, ಪ್ರಸನ್ನ ಹಾಗೂ ಕೈಗಾರಿಕೆಗಳ ಮಾಲೀಕರು, ವ್ಯವಸ್ಥಾಪಕರು ಕೋರಿದರು. ಕೆಲವು ಕಾರ್ಖಾನೆಗಳಲ್ಲಿ ಕಾರ್ಮಿಕರನ್ನು ಕಾಯಂಗೊಳಿಸದೆ 12ರಿಂದ 18 ಗಂಟೆಗಳ ಕಾಲ ಕನಿಷ್ಠ ಕೂಲಿ ನೀಡಿ ದುಡಿಸಿಕೊಳ್ಳಲಾಗುತ್ತಿವೆ.

ವಿಮಾ ಇನ್ನಿತರ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.ಜಿಲ್ಲಾಧಿಕಾರಿ ಜಾಫರ್ ಮಾತನಾಡಿ, ಮೂಲ ಸೌಕರ್ಯ ಕಲ್ಪಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸ್ಮಶಾನ ತೆರವು ಸೇರಿದಂತೆ  ಕಾರ್ಮಿಕರ ಸಮಸ್ಯೆಗಳನ್ನು  ಸಂಬಂಧಿಸಿದವರೊಡನೆ ಮಾತುಕತೆ ನಡೆಸಿ ಬಗೆಹರಿಸಲಾಗುವುದು ಎಂದರು.

ಜಿ.ಪಂ. ಸಿಇಓ ಜಯರಾಂ, ತಹಶೀಲ್ದಾರ್ ಚಂದ್ರಶೇಖರಯ್ಯ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸುಜ್ಞಾನಮೂರ್ತಿ, ತಾಲ್ಲೂಕು ಕೈಗಾರಿಕಾಧಿಕಾರಿ ಅಜಿತ್‌ಗೌಡ, ಸಿಪಿಐ ಪ್ರಶಾಂತ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.