ADVERTISEMENT

ಮೂಲ ಸೌಲಭ್ಯ ವಂಚಿತ ಜನಾಂಗ: ವಿಷಾದ.

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:35 IST
Last Updated 8 ಫೆಬ್ರುವರಿ 2011, 18:35 IST



ಕನಕಪುರ:  ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಾದಿಗ ಜನಾಂಗವನ್ನು ರಾಜ್ಯಾದ್ಯಂತ ಸಂಘಟಿಸಿ ರಾಜಕೀಯವಾಗಿ ಶಕ್ತಿ ತುಂಬುವ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಮಾದಿಗ ಯುವಸೇನೆ ಮಾಡಲಿದೆ ಎಂದು ಮಾದಿಗ ಯುವಸೇನೆ ರಾಜ್ಯಾಧ್ಯಕ್ಷ ವಿ.ಬಾಬು ತಿಳಿಸಿದರು.ಈ ಹಿಂದೆ ಮಾದಿಗ ಸಮುದಾಯ ಸಮಾಜದ ತುಳಿತಕ್ಕೆ ಒಳಗಾಗಿ ಎಲ್ಲ ಸವಲತ್ತುಗಳಿಂದ ವಂಚಿತವಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ರಾಜಕೀಯ ರಂಗದಲ್ಲೂ ಸಮುದಾಯವನ್ನು ಕಡೆಗಣಿಸಲಾಗಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳನ್ನು ಒದಗಿಸಲು ಹಾಗೂ ಅಭಿವೃದ್ಧಿಗಾಗಿ ಮಾದಿಗ ಯುವಸೇನೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದರು. ಈ ಹಿಂದೆ ಇದ್ದಂತಹ ಮಾದಿಗ ದಂಡೋರ ರಾಜಕೀಯ ಪ್ರವೇಶದಿಂದ ಜನಾಂಗ ಇಬ್ಬಾಗವಾಗಿದೆ. ಸಂಘಟನೆಯಲ್ಲಿ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿ ಮಾದಿಗ ಜನಾಂಗವು ಪರಿಶಿಷ್ಟ ಜಾತಿಗೆ ಸೇರಿದ್ದರೂ ಸಹ ಮೀಸಲಾತಿ, ಸರ್ಕಾರಿ ಸವಲತ್ತುಗಳಿಂದ ವಂಚಿತವಾಗಿದೆ. ಆದ್ದರಿಂದ ಮುಂದಿನ ದಿನದಲ್ಲಿ ಒಳಮೀಸಲಾತಿಗಾಗಿ ಹೋರಾಟ ನಡೆಸಲಾಗುವುದು. ಕಚೇರಿ ಉದ್ಘಾಟನೆ  ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಗೊಳಿಸಲಾಗುವುದು ಎಂದರು.

ಕಾರ್ಯಾಧ್ಯಕ್ಷ ಆರ್.ವೇಣು, ರಾಜ್ಯ ಪ್ರಧಾನ ಕಾರ್ಯದರ್ಶಿ ಜೀವರಾಜ್, ರಾಜ್ಯ ಉಪಾಧ್ಯಕ್ಷ ರವಿಕುಮಾರ್, ರಾಮನಗರ ಜಿಲಾಧ್ಲ್ಯಕ್ಷ ಸಿ.ರಾಮಯ್ಯ, ತಾಲ್ಲೂಕು ಅಧ್ಯಕ್ಷ ಕೆ.ವಿ.ವೆಂಕಟೇಶ್, ಕಾರ್ಯಾಧ್ಯಕ್ಷ ವೆಂಕಟರಮಣಯ್ಯ, ನಗರಾಧ್ಯಕ್ಷ ಶಿವಮಾದು ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನೆ: ಮಾದಿಗ ಯುವಸೇನೆ ಕೇಂದ್ರ ಕಚೇರಿ ಉದ್ಘಾಟನೆಯನ್ನು ಇದೇ 11ರಂದು ಪಟ್ಟಣದ ಇಂದಿರಾನಗರದಲ್ಲಿ ನೆರವೇರಿಸಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ್ಷ ವಿ.ಬಾಬು ತಿಳಿಸಿದ್ದಾರೆ.ಶಾಸಕ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ. ಚನ್ನಪಟ್ಟಣ ಡಿ.ವೈ.ಎಸ್.ಪಿ. ಟಿ.ಸಿದ್ದಪ್ಪ  ಕಚೇರಿ ಉದ್ಘಾಟನೆ ಮಾಡಲಿದ್ದಾರೆ.  ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತಿಮ್ಮಪ್ಪ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡುವರು.ತಹಶೀಲ್ದಾರ್ ಸಿ.ಅನಿತಾ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಕಾಂಗ್ರೆಸ್ ಯುವ ಮುಖಂಡ ಡಿ.ಕೆ.ಸುರೇಶ್, ಕುಕ್ಕುಟ ಮಹಾಮಂಡಳಿ ನಿರ್ದೇಶಕ ಬಿ.ನಾಗರಾಜು, ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಬಿ.ನಾಗರಾಜು ಮತ್ತಿತರರು ಭಾಗವಹಿಸಲಿದ್ದಾರೆ. 

ವೇತನಕ್ಕೆ ಒತ್ತಾಯ

ADVERTISEMENT

ಕನಕಪುರ:  ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೂ 6ನೇ ವೇತನ ಆಯೋಗದ ವೇತನ ಹಾಗೂ ಭತ್ಯೆಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕನಕಪುರ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಇಂದು ಮಧ್ಯಾಹ್ನ ತಾಲ್ಲೂಕು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ನೌಕರ ಸಂಘದ ಅಧ್ಯಕ್ಷ ಡಾ.ಎಸ್.ನಿಂಗರಾಜಯ್ಯ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.