ADVERTISEMENT

ಮೆಸ್ಕಾಂ: ನೌಕರಿ ಕಾಯಂಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಮಂಗಳೂರು: ಮೆಸ್ಕಾಂನ ಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ `ಮೆಸ್ಕಾಂ ನಾನ್ ಪರ್ಮನೆಂಟ್ ನೌಕರರ ಸಂಘ~ ಹಾಗೂ ಸಿಐಟಿಯು ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಮೆಸ್ಕಾಂನಲ್ಲಿ ಕಾರ್ಯನಿರ್ವ ಹಿಸುತ್ತಿರುವ ಗುತ್ತಿಗೆ ನೌಕರರಿಗೆ ರೂ 3 ಸಾವಿರ ಸಂಬಳ ನೀಡಿ ವಂಚಿಸಲಾಗುತ್ತಿದೆ. ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ. ನೌಕರರ ಜೀವನ ದುಸ್ತರವಾಗಿದೆ. ಕೂಡಲೇ ಹುದ್ದೇ ಕಾಯಂಗೊಳಿಸುವ ಜತೆಗೇ ಎಲ್ಲ ಸೌಲಭ್ಯ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೆಸ್ಕಾಂ ನಾನ್ ಪರ್ಮನೆಂಟ್ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ಮಾತನಾಡಿ ಬೆಸ್ಕಾಂ, ಸೆಸ್ಕ್, ಮೆಸ್ಕಾಂ ಸೃಷ್ಟಿಸಿ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ಕೆಲಸವನ್ನು ಬಹಳ ವರ್ಷಗಳ ಹಿಂದಿನಿಂದಲೇ ನಡೆಸಲಾಗುತ್ತಿದೆ. ಆದರೆ ಹುದ್ದೆಗಳನ್ನು ತುಂಬಲು ಯಾವುದೇ ಅಡೆತಡೆ ಇಲ್ಲ. ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿ, ಸೌಲಭ್ಯ ನೀಡದೇ ಇರುವುದು ಸರಿಯಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆಗಳು: ಕನಿಷ್ಠ ವೇತನ ಕಾಯಿದೆ 1948 ರ ಆಧಾರದ ಮೇಲೆ ಸ್ಕಿಲ್ಡ್ ನೌಕರರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ನೀಡಬೇಕು, 2 ತಿಂಗಳಿಂದ ಬಾಕಿ ಇರುವ ಸಂಬಳ ಪಾವತಿ ಮಾಡಬೇಕು, ಮಾಪನ ಓದುವವರಿಗೆ ಕನಿಷ್ಠ ವೇತನ ಜತೆ ಪ್ರಯಾಣ ಭತ್ಯೆ, ದಿನ ಭತ್ಯೆ ನೀಡಬೇಕು, ಪಿಎಫ್, ಇಎಸ್‌ಐ, ಉದ್ಯೋಗ ಹಾಗೂ ವೇತನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಾಚಾರಿ, ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಶಿವಮೊಗ್ಗದ ಶಿವಶಂಕರ್ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.