ಮೈಸೂರು:  ಇಲ್ಲಿನ ಉದಯಗಿರಿಯ ಮೊದಲನೇ ಹಂತ, 4ನೇ ಕ್ರಾಸ್‌ಗೆ ಹೋದರೆ ಚೆಂದದ ಉದ್ಯಾನವೊಂದು ಗಮನ ಸೆಳೆಯುತ್ತದೆ. ಇದು ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನ. ಆದರೆ, ನಿರ್ವಹಣೆ ಮಾಡುತ್ತಿರುವವರು ಅಲ್ಲಿನ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಪತ್ರಿಕಾ ವಿತರಕರು.
 ಸಂಘದ ಅಧ್ಯಕ್ಷ ಜವರಪ್ಪ ಹಾಗೂ ಪತ್ರಿಕಾ ವಿತರಕರಾದ ಜಿ.ಕುಮಾರ್ ಹಾಗೂ ರಾಜು ಏಳು ವರ್ಷಗಳಿಂದ ಉದ್ಯಾನವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2005ರ ಆಗಸ್ಟ್ 31ರಂದು ನಿವೃತ್ತರಾಗಿರುವ ಜವರಪ್ಪ, ಉದ್ಯಾನದ ನಿರ್ವಹಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಎಷ್ಟೋ ಬಾರಿ ಸ್ವಂತ ದುಡ್ಡಿನಲ್ಲಿ ಹಲವು ಬಗೆಯ ಸಸಿಗಳನ್ನು ನೆಟ್ಟಿದ್ದಾರೆ. ಟ್ಯಾಂಕರ್ ನಲ್ಲಿ ನೀರು ಹಾಕಿ ಗಿಡ ಪೋಷಿಸಿದ್ದಾರೆ.
ಪಾಲಿಕೆಯ ತೋಟಗಾರಿಕಾ ವಿಭಾಗದ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಾರಾದರೂ ಬಹುತೇಕ ಉಸ್ತುವಾರಿ ಇವರದ್ದೇ. ಒಂದರ್ಥದಲ್ಲಿ ಪಾಳಿಯಲ್ಲಿ ಕಾವಲು ಕಾಯುತ್ತ ಉದ್ಯಾನದಲ್ಲಿರುವ ಗಿಡಮರಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಉದ್ಯಾನ ಹಸಿರಿನಿಂದ ನಳನಳಿಸುತ್ತಿದೆ. ಮಕ್ಕಳು, ವಯೋವೃದ್ಧರು ಬೆಳಿಗ್ಗೆ, ಸಂಜೆ ವಾಯುವಿಹಾರ, ಆಟೋಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಕುಮಾರ್ 33 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಯಾತಮಾರನಹಳ್ಳಿ, ಉದಯಗಿರಿ, ಗಾಯತ್ರಿಪುರಂನಲ್ಲಿ ಮನೆ ಮನೆಗೆ ಪತ್ರಿಕೆ ತಲುಪಿಸುವ ಹೊಣೆ ಇವರದ್ದು. `ಕೆಲಸದಲ್ಲಿ ತೃಪ್ತಿ ಇದೆ. ಜೀವನ ಸಾಗಿಸುತ್ತಿದ್ದೇನೆ. ಯಾವುದೇ ಸಮಸ್ಯೆ ಇಲ್ಲ~ ಎಂಬುದು ಕುಮಾರ್ ಅವರ ಅಭಿಮತ.
ಸಮಾಜಮುಖಿ ಕೆಲಸ - ಕಾರ್ಯಗಳಲ್ಲೂ ಮೈಸೂರು ಪತ್ರಿಕಾ ವಿತರಕರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. 2009ರಲ್ಲಿ ಕ್ಯಾತಮಾರನಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ವದಂತಿ ಹಬ್ಬಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ವ್ಯಕ್ತಿಯೊಬ್ಬರಿಗೆ ಅಪಘಾತವಾದಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜತೆಗೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನೂ ಭರಿಸಿ ಮಾನವೀಯತೆ ಮೆರೆದಿದ್ದಾರೆ.
ಸುಮಾರು ವರ್ಷಗಳ ಹಿಂದಿನ ಮಾತು. ಪತ್ರಿಕಾ ವಿತರಕರಾಗಿದ್ದ ಶ್ರೀಕಂಠಯ್ಯ (ಹೆಸರು ಬದಲಾಯಿಸಲಾಗಿದೆ) ಅವರ ಪತ್ನಿ ಬೆಳಗಿನ ಜಾವ ತೀರಿ ಹೋದರು. ಶ್ರೀಕಂಠಯ್ಯನವರಿಗೆ ವಿಷಯ ಗೊತ್ತಾಗುವ ಹೊತ್ತಿಗೆ ಆಗಲೇ ಸೈಕಲ್ ಮೇಲೆ ಪತ್ರಿಕೆಗಳ ಬಂಡಲ್ ಇಟ್ಟು, ಕೆಲಸಕ್ಕೆ ಅಣಿಯಾಗಿದ್ದರು. ಪತ್ನಿಯ ಸಾವಿನಿಂದ ವಿಚಲಿತರಾಗದ ಅವರು ಎಲ್ಲ ಮನೆಗಳಿಗೂ ಪತ್ರಿಕೆ ವಿತರಿಸಿದ ಬಳಿಕವಷ್ಟೇ ಮನೆಗೆ ಮರಳಿದ್ದರು. ವೃತ್ತಿಯ ಬಗೆಗಿನ ಇವರಿಗಿದ್ದ ಕಾಳಜಿಯನ್ನು ಕಂಡ ಅದೆಷ್ಟೋ ಜನ ಮರುಗಿದ್ದರು.
ಮೈಸೂರು ನಗರ ಪತ್ರಿಕಾ ವಿತರಕರ ಸಂಘದಲ್ಲಿ 800 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇವರಲ್ಲಿ 200 ಕ್ಕೂ ಹೆಚ್ಚು ವಿತರಕರು ಯಾವುದೇ ಕ್ಷಣದಲ್ಲಿ ರಕ್ತದಾನಕ್ಕೆ ಸಿದ್ಧರಾಗಿರುವುದು ವಿಶೇಷ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಮಂದಿಗೆ ರಕ್ತದಾನ ಮಾಡಲಾಗಿದೆ. `ಪತ್ರಿಕಾ ವಿತರಕರಿಗೆ ಪ್ರತಿಯೊಂದು ವಾರ್ಡ್‌ಗಳ ಬಗ್ಗೆ ಮಾಹಿತಿ ಇರುತ್ತದೆ. ಅದೇ ರೀತಿ ಹಾಲು ವಿತರಣೆ ಮಾಡುವವರಿಗೂ ಆಯಾ ಭಾಗದ ಮನೆಗಳ ಪರಿಚಯವಿರುತ್ತದೆ. ಹೀಗಾಗಿ ಸ್ಥಳೀಯ ಪೊಲೀಸರು ಪತ್ರಿಕಾ ವಿತರಕರನ್ನು ಮಾಹಿತಿದಾರನ್ನಾಗಿ ಬಳಸಿಕೊಳ್ಳಬೇಕು~ ಎನ್ನುತ್ತಾರೆ ಸಂಘದ ಅಧ್ಯಕ್ಷ ಕೆ.ಸುರೇಶ್.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.