ADVERTISEMENT

ಯಾವುದೇ ಕ್ಷಣದಲ್ಲಿ ಚುನಾವಣೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:40 IST
Last Updated 23 ಜನವರಿ 2011, 19:40 IST

ಚಿತ್ತಾಪುರ: ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಬರಬಹುದು ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದರು.ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ನೂತನ ಸದಸ್ಯರ ಹಾಗೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ರಕ್ಷಣೆ ಮಾಡಬೇಕಾದವರು ಬೀದಿಗಿಳಿದು ಕಾನೂನು ಮುರಿಯುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ತಯಾರಾಗಿರಬೇಕು ಎಂದರು.

ಅಪರಾಧ ಪ್ರಕರಣ ದಾಖಲಾದರೂ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ನೈತಿಕತೆ ಇದ್ದ ಮನುಷ್ಯ ತಕ್ಷಣ ಜಾಗ ಖಾಲಿ ಮಾಡುತ್ತಿದ್ದ.ಅದಿಲ್ಲ ಎಂದ ಮೇಲೆ ಕುತ್ತಿಗೆಗೆ ಕೈ ಹಾಕಿ ಹೊರದಬ್ಬಿದರೂ ಹೋಗದಿರಲು ಹೇಗೆ ಸಾಧ್ಯ ಎಂದು ಗುಡುಗಿದರು.

ತಾವು ಕೇಂದ್ರ ಸಚಿವರಾದ ನಂತರ ರಾಜ್ಯಕ್ಕೆ ವಿವಿಧ ಯೋಜನೆಗಳಲ್ಲಿ ಒಟ್ಟು 3,500 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ.ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಬಿಜೆಪಿ ಸರ್ಕಾರಕ್ಕೆ ಗೊತ್ತಿಲ್ಲ.ಅನುದಾನ ಸಾಮಾನ್ಯ ಜನರಿಗೆ ಮುಟ್ಟಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ ಎಂದು ಖರ್ಗೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.