ADVERTISEMENT

ಯೋಜನೆ ಯಶಸ್ಸಿಗೆ ಸ್ಥಳೀಯರ ಕಾಳಜಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಕವಿತಾಳ: ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿ ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹೆಮ್ಮೆ ಇದೆ. ಇನ್ನೂ ಹೆಚ್ಚಿನ ಅಭಿವೃದ್ದ್ಧಿ ಕೆಲಸಗಳನ್ನು ಕೈಗೊಳ್ಳಲು ಕ್ಷೇತ್ರದ ಜನತೆ ಸಹಕಾರ ನೀಡಬೇಕು ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಪಾಟೀಲ್ ಹೇಳಿದರು.

ಸಮೀಪದ ಪಾಮನಕಲ್ಲೂರಿನಲ್ಲಿ ಉರ್ದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಮಹತ್ವ ನೀಡಿದೆ. ಸ್ಥಳೀಯರು ಕಾಳಜಿ ವಹಿಸಿದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.

ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಇದೇ ಬರುವ ಆರ್ಥಿಕ ವರ್ಷದಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿ 10 ಪ್ರೌಢಶಾಲೆ ಮತ್ತು 2 ಕಸ್ತೂರ್ಬಾ ಶಾಲೆಗಳನ್ನು ಮಂಜೂರು ಮಾಡಿಸಿದ್ದು ಕಿತ್ತೂರರಾಣಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಕುಡಿಯುವ ನೀರು, ರಸ್ತೆ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡ ಎಕ್ಬಾಲ್‌ಸಾಬ್ ಮಾನ್ವಿ ಮಾತನಾಡಿ ಭರವಸೆ ನೀಡಿದಂತೆ ಉರ್ದು ಶಾಲೆಯನ್ನು ಮಂಜೂರು ಮಾಡಿಸಿ ಶಾಸಕರು ಶೈಕ್ಷಣಿಕ ಪ್ರಗತಿಗೆ ಸಹಕರಿಸಿದ್ದಾರೆ ಎಂದರು. ಹಾಲಾಪುರದಲ್ಲಿ ಉರ್ದು ಶಾಲೆ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ರವಿ ಜಹಗೀರದಾರ್, ವಿಶ್ವನಾಥರೆಡ್ಡಿ ಅಮೀನಗಡ, ಚಂದ್ರಕಾಂತ ಪಾಟೀಲ್ ಗೂಗೆಬಾಳ, ಶರಣಪ್ಪ ತೋರಣದಿನ್ನಿ, ಮಲ್ಲಪ್ಪ ಅಂಕುಶದೊಡ್ಡಿ, ವೆಂಕಟೇಶ ಚೀಕಲಪರ್ವಿ, ಮಲ್ಲಪ್ಪ ಅಮೀನಗಡ, ಮೌನೇಶ ದೊಡ್ಮನಿ, ವಿಜಯಕುಮಾರ ಗುತ್ತೇದಾರ, ಶಿವಕುಮಾರ ವಟಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.