ADVERTISEMENT

ರಕ್ತದಾನ: ತಪ್ಪು ಕಲ್ಪನೆ ನಿವಾರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ದಾವಣಗೆರೆ: ಜನರಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಕರೆ ನೀಡಿದರು.

ನಗರದ ಚಿಗಟೇರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಆಶ್ರಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ರಕ್ತದಾನ ಕುರಿತು ಜನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ರಕ್ತದ ಕೊರತೆ ನೀಗಿಸಲು ಸಹಕಾರಿಯಾಗುತ್ತಿದೆ. ಇದು ಇತರರಿಗೆ ಮಾದರಿಯಾಗಬೇಕು. ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಜಿ. ಬಸಲಿಂಗಪ್ಪ, ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಆವಶ್ಯಕ ಎಂದು ತಿಳಿಸಿದರು.

ಸಿಇಒ ಗುತ್ತಿ ಜಂಬುನಾಥ್, ಟಿ. ಮುಕುಂದ, ಡಾ.ಶಶಿಕಲಾ ಕೃಷ್ಣಮೂರ್ತಿ, ಡಾ.ಬಿ.ಆರ್. ಸುತ್ರಾದೇವಿ,  ವಿದ್ಯಾರ್ಥಿನಿ ಶೀತಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳು ನಗರದ ವಿವಿಧೆಡೆ ಜಾಥಾ ನಡೆಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.