ADVERTISEMENT

ರಕ್ತ ಸೃಷ್ಟಿ ಅಸಾಧ್ಯ: ದಾನವೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಶಿವಮೊಗ್ಗ: ಆಧುನಿಕ ತಂತ್ರಜ್ಞಾನದಿಂದ ಮನುಷ್ಯ ಎಲ್ಲವನ್ನೂ ಪರ್ಯಾಯವಾಗಿ ಸೃಷ್ಟಿಸಬಲ್ಲ; ಆದರೆ, ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ದಾನದಿಂದ ಮಾತ್ರ ರಕ್ತ ಪಡೆದು, ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ವಿ. ವೇದಾಮೂರ್ತಿ ಅಭಿಪ್ರಾಯಪಟ್ಟರು.

ನಗರದ ಆಟೋ ಕಾಂಪ್ಲೆಕ್ಸನ್ ಮಲ್ಲಿಕಾರ್ಜುನ ಆಗ್ರೋದಲ್ಲಿ ಶನಿವಾರ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಐದನೇ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದಿಂದ ಸದಾ ಲವಲವಿಕೆ ಇರುತ್ತದೆ. ಹೊಸ ರಕ್ತ ಚಲನೆಯಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಅಮೇರಿಕಾ ದೇಶದ ವರದಿಯ ಪ್ರಕಾರ ರಕ್ತದಾನಿಗಳಿಗೆ ಹೃದಯಘಾತ ಶೇ. 80 ರಷ್ಟು ಕಡಿಮೆಯಾಗುತ್ತದೆ ಎಂದರು. ಜನರಿಗೆ ರಕ್ತದಾನದ ಬಗ್ಗೆ ಅರಿವಿನ ಕೊರತೆ ಇದೆ. ಈ ನಿಟ್ಟಿನಲ್ಲಿ  ಸಂಘ-ಸಂಸ್ಥೆಗಳು ರಕ್ತದಾನ ಮಾಡಲು ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.

ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ.ವಿ.ಎಲ್.ಎಸ್. ಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ದಿನಕ್ಕೆ ಸುಮಾ ರು 50ರಿಂದ 70 ಬಾಟಲ್ ರಕ್ತದ ಬೇಡಿಕೆ ಇದ್ದು, ಶೇ. 60ರಷ್ಟು ಮಾತ್ರ ರಕ್ತ ಪೂರೈಕೆಯಾಗುತ್ತಿದೆ.

ತುರ್ತುಸಂದರ್ಭದಲ್ಲಿ ಜನರ ಜೀವ ಉಳಿಸಲು ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಜಂಟಿ ನಿರ್ದೇಶಕ ಎಚ್.ಎಂ. ಶ್ರೀನಿವಾಸ್, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಕಾರ್ಯಾಧ್ಯಕ್ಷ ಜಿ. ವಿಜಯಕುಮಾರ್, ಪದಾಧಿಕಾರಿಗಳಾದ ಧರಣೇಂದ್ರ ದಿನಕರ್, ಲೋಕನಾಥ್, ಎಂ.ಎನ್. ವೆಂಕಟೇಶ್, ಯಜ್ಞ ನಾರಾಯಣ್, ಮಧುಸೂದನ್, ಎಸ್.ಎಸ್. ವಾಗೀಶ್ ಉಪಸ್ಥಿತರಿದ್ದರು.

ಶಿಬಿರದಲ್ಲಿ 163 ಬಾಟಲ್ ರಕ್ತವನ್ನು ದಾನಿಗಳಿಂದ ಶೇಖರಿಸಲಾಯಿತು. ದಾನಿಗಳಿಗೆ ಮಲ್ಲಿಕಾರ್ಜುನ ಆಗ್ರೋವತಿಯಿಂದ ರೂ 1 ಲಕ್ಷ ವೈಯಕ್ತಿಕ ಅಪಘಾತ ವಿಮೆ, ರೂ 25 ಸಾವಿರ ಅಪಘಾತ ವೈದ್ಯಕೀಯ ವೆಚ್ಚ ವಿಮೆಯನ್ನು ಓರಿಯಂಟಲ್ ಇನ್ಸುರೆನ್ಸ್ ಕಂಪೆನಿ ವತಿಯಿಂದ 1ವರ್ಷದ ಅವಧಿಗೆ ನಾಗರಿಕ ಸುರಕ್ಷಾ ಪಾಲಿಸಿಯನ್ನು ಉಚಿತವಾಗಿ ಮಾಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.