ಚಿತ್ರದುರ್ಗ: ಈರುಳ್ಳಿ ರಫ್ತು ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಕೇಂದ್ರ ಸಚಿವ ಶರದ್ ಪವಾರ್ ಪ್ರತಿಕೃತಿ ದಹಿಸಿ ಈರುಳ್ಳಿಯನ್ನು ರಸ್ತೆಗೆ ಸುರಿದು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು.
ಈರುಳ್ಳಿ ಜಿಲ್ಲೆಯ ರೈತರಿಗೆ ವಾಣಿಜ್ಯ ಬೆಳೆಯಾಗಿದ್ದು ಕೂಲಿ, ಬೀಜ, ಗೊಬ್ಬರ ಔಷಧಿ ಸೇರಿಕೊಂಡು 1 ಎಕರೆಗೆ ಸುಮಾರು ರೂ 40ಸಾವಿರ ವೆಚ್ಚ ಮಾಡಿ ರೈತರು ಈರುಳ್ಳಿ ಬೆಳೆದಿದ್ದಾರೆ. ಆದರೆ, ರಫ್ತು ನಿಷೇಧ ಮಾಡಿದ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಭಾರತದ 5 ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಶರದ್ ಪವಾರ್ ಮತದಾರರನ್ನು ಓಲೈಸಲು ಹಾಗೂ ಈರುಳ್ಳಿ ಬೆಳೆಗಾರರನ್ನು ಬಲಿಪಶು ಮಾಡುವ ಉದ್ದೇಶದಿಂದ ಈರುಳ್ಳಿ ರಫ್ತು ನಿಷೇಧಿಸಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ಕೃಷಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಈರುಳ್ಳಿ ರಫ್ತು ನಿಷೇಧವನ್ನು ವಾಪಸ್ ಪಡೆಯುವ ಮೂಲಕ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆದ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ರೈತಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಟಿ. ಗಂಗಾಧರ್ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.