ADVERTISEMENT

ರಸ್ತೆ ಗುಂಡಿ ಮುಚ್ಚಿದ ಗ್ರಾ.ಪಂ. ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ತುರುವೇಕೆರೆ: ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋದ ಗ್ರಾಮ ಪಂಚಾಯತಿ ಅಧ್ಯಕ್ಷರು ತಾವೇ ಗುದ್ದಲಿ, ಮಂಕರಿ ಕೈಗೆತ್ತಿಕೊಂಡು ರಸ್ತೆಯ ಗುಂಡಿ ಮುಚ್ಚಿದ ಘಟನೆ ಶನಿವಾರ ತಾಲ್ಲೂಕಿನ ಅಮ್ಮಸಂದ್ರದಲ್ಲಿ ನಡೆದಿದೆ.

ತುರುವೇಕೆರೆ- ಅಮ್ಮಸಂದ್ರ ರಸ್ತೆಯು ಹೋಬಳಿ ಕೇಂದ್ರವಾದ ದಂಡಿನಶಿವರ ಮಾರ್ಗವಾಗಿ ಹಾದು ಹೋಗುತ್ತದೆ. ಈ ರಸ್ತೆ ಉದ್ದಕ್ಕೂ ಗುಂಡಿಗಳಿಂದ ಕೂಡಿದ್ದು ವಾಹನ ಚಾಲಕರು ಓಡಾಡುವುದೇ ಕಷ್ಟಕರವಾಗಿದೆ. ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯ. ಅಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವರಾಜ್ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುವಂತೆ ಹಲವಾರು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೂ ಇಲಾಖೆ ಇತ್ತ ತಿರುಗಿಯೂ ನೋಡಿರಲಿಲ್ಲ.

ಎರಡು ದಿನಗಳ ಹಿಂದೆ ದಂಡಿನಶಿವರದಲ್ಲಿ ರಸ್ತೆ ಗುಂಡಿಯಲ್ಲಿ ಬೈಕ್ ಸವಾರ ಬಿದ್ದು ಮೂಳೆ ಮುರಿದುಕೊಂಡರು. ಇದರಿಂದ ಬೇಸತ್ತು ಶನಿವಾರ ಶಿವರಾಜ್ ತಾವೇ ಗುಂಡಿ ಮುಚ್ಚಿದರು.

ತಾಲ್ಲೂಕಿನ ರಸ್ತೆಗಳ ನಿರ್ವಹಣೆಗೆ 1.17 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಆದರೂ ರಸ್ತೆಗಳು ದುರಸ್ತಿಯಾಗಿಲ್ಲ. ಇದು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಮ್ಮೂರಿನ ಕೆಲಸ ನಾವೇ ಮಾಡಿಕೊಳ್ಳುವುದರಲ್ಲಿ ಅವಮಾನವೇನಿದೆ? ಪ್ರಾಣಾಪಾಯ ತಡೆಯುವ ದೃಷ್ಟಿಯಿಂದ ನಾನೇ ಗುಂಡಿ ಮುಚ್ಚಲು ಮುಂದಾಗಿದ್ದೇನೆ ಎಂದು ಶಿವರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.