ADVERTISEMENT

ರಾಜಕಾರಣಿಗಳಿಗೆ ಜನರ ಆಶೀರ್ವಾದವೇ ಉತ್ತಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಚನ್ನರಾಯಪಟ್ಟಣ:  `ರಾಜಕಾರಣಿಗಳಿಗೆ ದೇವರ ಕೃಪೆಯ ಜತೆಗೆ ಜನರ ಆಶೀರ್ವಾದ ಬೇಕು~ ಎಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ನವಿಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೆಂಪಮ್ಮ ದೇವಿದೇಗುಲದ ಪ್ರಾರಂಭೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ `ಧಾರ್ಮಿಕ ಸಮಾರಂಭ~ ಉದ್ಘಾಟಿಸಿ ಅವರು ಮಾತನಾಡಿದರು.
`ಜನರ ನಡುವೆ ಇದ್ದು ಕೆಲಸ ಮಾಡಿದಾಗ ಅಂಥವರನ್ನು ಗುರುತಿಸುತ್ತಾರೆ. ಸಮಾಜದಲ್ಲಿ ಯಾರಿಗೂ ಕೇಡು ಬಯಸದೆ, ಸಮಾನತೆ ಇರುವ ಸಮಾಜವನ್ನು ನಿರ್ಮಿಸಬೇಕಾಗಿದೆ~ ಎಂದರು.

`ಸಂತರು, ದಾರ್ಶನಿಕರು, ಸೂಫಿಗಳಂಥ ಮಹಾನುಭವರು ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ ಜನ ಸಾಮಾನ್ಯರ ಒಳಿತಿಗಾಗಿ ದುಡಿದು ಮಹಾತ್ಮರೆನಿಸಿಕೊಂಡರು. ಇವರು ಹಾಕಿಕೊಟ್ಟ ಮಾರ್ಗದಲ್ಲಿ ಜನತೆ ನಡೆಯಬೇಕು. ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯ ಮರೆಯಬಾರದು. ಭಗವಂತನಿಗೆ ಕಾಣಿಕೆ ಸಲ್ಲಿಸುವುದು ಮುಖ್ಯವಲ್ಲ. ಶುದ್ಧ ಮನಸ್ಸಿನಿಂದ ಅನನ್ಯ ಭಕ್ತಿ ಸಮರ್ಪಿಸಬೇಕು~ ಎಂದರು. ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿದರು. ಕೆ.ಆರ್. ನಗರದ ಕಾಗಿನೆಲೆ ಶಾಖಾಮಠಾಧೀಶ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಈ. ಚಂದ್ರಶೇಖರ್, ಜಿ.ಪಂ. ಸದಸ್ಯ ಶಿವಶಂಕರ್ ಕುಂಟೆ, ಮಾಜಿ ಸದಸ್ಯ ಎಂ.ಕೆ. ಮಂಜೇಗೌಡ, ಹೂಡ ಅಧ್ಯಕ್ಷ ನವಿಲೆ ಅಣ್ಣಪ್ಪ, ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ, ಕಬ್ಬಳಿ ರಂಗೇಗೌಡ, ಎಂ.ಎ. ರಂಗಸ್ವಾಮಿ, ಕೆ.ಎಲ್. ರವಿಕುಮಾರ್, ಎಚ್‌ಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಎಚ್.ಎಸ್. ಶ್ರೀಕಂಠಯ್ಯ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.