ADVERTISEMENT

ರಾಜ್ಯದ 7254 ಕಿ.ಮೀ. ರಸ್ತೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಗಂಗಾವತಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಸುಮಾರು 7254 ಕಿ.ಮೀ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ರೂ. 2797 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಮಗ್ನವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಹೇಳಿದರು.

ಏಷ್ಯಾ ಅಭಿವೃದ್ಧಿ ಬ್ಯಾಂಕಿನ ಹಣಕಾಸು ನೆರವಿನಲ್ಲಿ `ಕೆಶಿಪ್~ ಯೋಜನೆಯಡಿ ರಾಜ್ಯ ಹೆದ್ದಾರಿ 29ರ ಗಂಗಾವತಿ- ಮುದ್ಗಲ್ ಸಂಪರ್ಕ ಕಲ್ಪಿಸುವ 74 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು, 2,797 ಕೋಟಿ ಮೊತ್ತದ ಕಾಮಗಾರಿಯನ್ನು ಹಣಕಾಸು ಅನುಮೋದನೆಗೆ ಕಳಿಸಲಾಗಿದೆ. ಶೀಘ್ರ ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ ಎಂದರು.

ಹೈ-ಕ ಹಿಂದುಳಿದ ಪ್ರದೇಶ ಎಂಬುವುದನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲ ಜಿಲ್ಲೆ, ಪ್ರದೇಶಕ್ಕಿಂತ ಹೆಚ್ಚಿನ ಅನುದಾನವನ್ನು ಇಲ್ಲಿನ ಜಿಲ್ಲೆಗಳಿಗೆ ನೀಡಲಾಗುತ್ತಿದೆ. ಈ ಹಿಂದಿನ ಯಾವ ಸರ್ಕಾರಗಳೂ ನೀಡದಷ್ಟು ಹಣವನ್ನು ಈಗಿನ ಸರ್ಕಾರ ಹೈ-ಕ ಭಾಗಕ್ಕೆ ನೀಡಿದೆ ಎಂದು ವಿವರಿಸಿದರು.

ದೇಶದಲ್ಲಿ ಸ್ಥಿರ ಆರ್ಥಿಕ ನೀತಿ ಪ್ರಕಟಿಸಬೇಕು. ಸರ್ಕಾರ ಬದಲಾದರೂ ಆರ್ಥಿಕ ನೀತಿ ಬದಲಾಗಬಾರದು. ಒಟ್ಟು ಆದಾಯದಲ್ಲಿ ಒಂದು ನಿಗದಿತ ಪ್ರಮಾಣವನ್ನು ಶಿಕ್ಷಣ, ಆರೋಗ್ಯ, ನೀರು, ರಸ್ತೆಯಂಥ ಮೂಲ ಸೌಕರ್ಯಕ್ಕೆ ಮೀಸಲಿಡುವ ಬಗ್ಗೆ ಚರ್ಚೆಯಾಗಬೇಕು ಎಂದರು.

ವಿಶ್ವ ಬ್ಯಾಂಕಿನಿಂದ 4,500 ಕೋಟಿ ಹಣಕಾಸಿನ ನೆರವು ಪಡೆದು ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಹಿಂದೆ ಯಾವ ಸರ್ಕಾರವೂ ರಾಜ್ಯದ ಇಷ್ಟೊಂದು ಪ್ರಮಾಣದ ರಸ್ತೆ ಅಭಿವೃದ್ಧಿ ಮಾಡಿರಲಿಲ್ಲ ಎಂದು ಸಚಿವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.