ADVERTISEMENT

ರಾವಣನಿಗೆ ರಾಕ್ಷಸನ ಹೋಲಿಕೆ: ಶ್ರೀಗಳ ವಿಷಾದ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಕುಷ್ಟಗಿ: ಮಹಾಭಕ್ತ ರಾವಣ ತನ್ನ ಭಕ್ತಿಯ ಪರಾಕಾಷ್ಠೆಯಿಂದ ಸ್ವತಃ ಪರಶಿವನನ್ನೇ ಸಾಕ್ಷಾತ್ಕರಿಸಿಕೊಂಡು ಆತ್ಮಲಿಂಗ ಪಡೆದ. ಆದರೆ ಸುಸಂಸ್ಕೃತರೆನಿಸಿಕೊಂಡವರು, ಸಾಹಿತಿಗಳು ಆತನನ್ನು ರಾಕ್ಷಸನಿಗೆ ಹೋಲಿಸಿ ಅಪಚಾರಗೈದಿರುವುದು ದುರದೃಷ್ಟಕರ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಇಲ್ಲಿ ವಿಷಾದಿಸಿದರು.

ರೇಣುಕಾಚಾರ್ಯ ಮಂಗಲ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ `ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮೋತ್ತೇಜನ ಸಮಾರಂಭ~ದ ಅಂಗವಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.

ನಾವು ಬದುಕಿನುದ್ದಕ್ಕೂ ಗಳಿಸಿದ ಸಂಪತ್ತು, ಐಶ್ವರ್ಯ ಸಾವಿನೊಂದಿಗೆ ನಮ್ಮ ಜೊತೆಗಿರುವುದಿಲ್ಲ ಎಂಬುದನ್ನು ವೀರಶೈವರು ಮರೆಯಬಾರದು. ಪ್ರತಿಯೊಬ್ಬರಿಗೂ ಮೊಬೈಲ್ ದೂರವಾಣಿ ಎಷ್ಟು ಅವಶ್ಯವೋ ಅದೇ ರೀತಿ ಇಷ್ಟಲಿಂಗವೂ ಅಷ್ಟೇ ಅವಶ್ಯ ಎನಿಸಬೇಕು ಎಂದ ಶ್ರೀಗಳು, ಇಷ್ಟಲಿಂಗ ಮೊಬೈಲ್‌ನಂತಾದರೆ ಸ್ಥಾವರಲಿಂಗ ಲ್ಯಾಂಡ್‌ಫೋನ್ ಇದ್ದಂತೆ ಎಂದು ಭಾವಿಸಿ ಭಕ್ತಿಯಿಂದ ಪೂಜಿಸುವಂತೆ ಕರೆ ನೀಡಿದರು.

ಚಳಗೇರಿಯ ವಿರೂಪಾಕ್ಷಲಿಂಗ ಸ್ವಾಮೀಜಿ, ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ, ಮದ್ದಾನಿಹಿರೇಮಠದ ಕರಿಬಸವ ಸ್ವಾಮೀಜಿ ಉಪಸ್ಥಿತರಿದ್ದರು.

ರೇಣುಕಾಚಾರ್ಯ ಮಂಗಲಭವನ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ.ಬಿ.ಎಂ. ಗೌಡರ್, ವೀರಣ್ಣ ಬಳಿಗಾರ, ಮಾಜಿ ಶಾಸಕ ಕೆ.ಶರಣಪ್ಪ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಕುಡತಿನಿ, ಬಸವರಾಜ ಕುದರಿಮೋತಿ, ಶೇಖರಯ್ಯ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಕೆ.ಮಹೇಶ್ ಇದ್ದರು. ಬೆಳಿಗ್ಗೆ ಇಷ್ಟಲಿಂಗ ಮಹಾಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.