ADVERTISEMENT

ರೇಷ್ಮೆ ಕೃಷಿಕರಿಂದ ರೈಲು ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 18:45 IST
Last Updated 14 ಮಾರ್ಚ್ 2011, 18:45 IST

ಚಿಕ್ಕಬಳ್ಳಾಪುರ: ಸುಂಕ ರಹಿತ ರೇಷ್ಮೆ ಆಮದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಹಿಂಪಡೆಯಬೇಕು, ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೇಷ್ಮೆ ಕೃಷಿಕರು ಸೋಮವಾರ ನಗರ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿದರು.

ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೇಷ್ಮೆ ಕೃಷಿಕರು, ‘ರೇಷ್ಮೆ ವಿರೋಧಿ ನೀತಿ ಅನುಸರಿಸುವುದನ್ನು ಕೇಂದ್ರ ಸರ್ಕಾರ ಕೈಬಿಡಬೇಕು’ ಎಂದು ಆಗ್ರಹಿಸಿದರು.

ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ‘ಸುಂಕ ರಹಿತ ರೇಷ್ಮೆ ಆಮದಿನಿಂದ ದೇಶಿಯ ರೇಷ್ಮೆ ಉದ್ಯಮಕ್ಕೆ ಭಾರಿ ಧಕ್ಕೆಯಾಗಲಿದೆ. ರೇಷ್ಮೆ ಕೃಷಿಕರು ಆರ್ಥಿಕ ನಷ್ಟಕ್ಕೆ ಒಳಗಾಗುವುದರ ಜೊತೆಗೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಲವು ಪ್ರತಿಭಟನೆ ನಡೆಸಿ, ಮನವಿಪತ್ರ ಸಲ್ಲಿಸಿದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ರೈತರ ಹಿತರಕ್ಷಣೆ ಮಾಡಬೇಕಾದ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ನಿರ್ಣಯ ಹಿಂಪಡೆಯುವವರೆಗೆ ಹೋರಾಟ ನಡೆಸಲಾಗುವುದು’ ಎಂದರು.ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ಮುಖಂಡರಾದ ಅಜ್ಜವಾರ ಶ್ರೀನಿವಾಸ್, ಡಿ.ಕೆ.ಶ್ರೀರಾಮ, ಭೋದಗುರು ಆಂಜನಪ್ಪ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಮಂಚನಬಲೆ ಶ್ರೀನಿವಾಸ್, ಬಿ.ಎಚ್.ನರಸಿಂಹಯ್ಯ, ಬೈರಾರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಮಧುಲತಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.