ADVERTISEMENT

ಲಾರಿ-ಬೈಕ್ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ನಾಗಮಂಗಲ: ತಾಲ್ಲೂಕಿನ ಚಿಣ್ಯ ಗ್ರಾಮದ ಬಿ.ಸಿ.ಎಂ ಹಾಸ್ಟೆಲ್ ಬಳಿ ಲಾರಿ ಮತ್ತು ಬೈಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.

 ಮೃತಪಟ್ಟವರನ್ನು ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ನಿವಾಸಿ ಬೋರೇಗೌಡ ಅವರ ಪುತ್ರಿಯರಾದ ಲಕ್ಷ್ಮಮ್ಮ (30), ಭವ್ಯ (24) ಹಾಗೂ ತಮ್ಮಣ್ಣ ಅವರ ಮಗ ಶಶಿಕುಮಾರ (22) ಎಂದು ಗುರುತಿಸಲಾಗಿದೆ. ಬೋರೇಗೌಡ ಹಾಗೂ ತಮ್ಮಣ್ಣ ಅಣ್ಣ ತಮ್ಮಂದಿರು ಎಂದು ತಿಳಿದು ಬಂದಿದೆ.

ಪಾರಾದ ಪುಟ್ಟ ಬಾಲೆ: ಭವ್ಯ ಅವರ 3 ವರ್ಷದ ಮಗಳು ಜಾಹ್ನವಿ ಕೂಡ ಬೈಕ್‌ನಲ್ಲಿದ್ದು ಈಕೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಈಕೆಯನ್ನು ಚಿಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಭವ್ಯ 6 ತಿಂಗಳ ಗರ್ಭಿಣಿ ಎಂಬುದಾಗಿ ಕೂಡ ಬಂಧುಗಳು ತಿಳಿಸಿದ್ದಾರೆ.

ಲಕ್ಷ್ಮಮ್ಮ ಅವರನ್ನು ಹೊನ್ನಮಡು ಗ್ರಾಮದ ಮಲ್ಲೇಗೌಡನಿಗೆ ವಿವಾಹ ಮಾಡಿಕೊಡಲಾಗಿತ್ತು. ಭವ್ಯ ಅವರನ್ನು ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ಕೆರೆಹಟ್ಣ ಗ್ರಾಮದ ಜವರಾಯಿ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಲಕ್ಷ್ಮಮ್ಮನ ನಾದಿನಿಯ ಗಂಡ ಕಳೆದೆರಡು ದಿನಗಳ ಹಿಂದೆ ಕನಗೇನಹಳ್ಳಿಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಾದಿನಿಯನ್ನು ಮಾತನಾಡಿಸಿಕೊಂಡು ಹೊನ್ನಮಡು ಗ್ರಾಮಕ್ಕೆ ಮರಳುವ ವೇಳೆ ದುರ್ಘಟನೆ ಸಂಭವಿಸಿದೆ.

ಲಾರಿ ಚಾಲಕ ಚನ್ನಿಗರಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.