ADVERTISEMENT

ಲೋಡ್ ಶೆಡ್ಡಿಂಗ್: ಅತಂತ್ರದಲ್ಲಿ ನೇಕಾರರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST
ಲೋಡ್ ಶೆಡ್ಡಿಂಗ್: ಅತಂತ್ರದಲ್ಲಿ ನೇಕಾರರು
ಲೋಡ್ ಶೆಡ್ಡಿಂಗ್: ಅತಂತ್ರದಲ್ಲಿ ನೇಕಾರರು   

ದೊಡ್ಡಬಳ್ಳಾಪುರ: ಹಬ್ಬಗಳ ಸಾಲಿನಲ್ಲೇ ವಿದ್ಯುತ್ ಕೈಕೊಟ್ಟಿದ್ದು ಕೆಲಸ ಇಲ್ಲದೆ ನೇಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿ ಬಹುತೇಕ ನೇಕಾರಿಕೆಯಲ್ಲಿನ ಕಾರ್ಮಿಕರು ವಾರವಿಡೀ ಕೆಲಸ ಮಾಡಿ ಭಾನುವಾರ ಬಟವಾಡೆ(ಸಂಬಳ) ಪಡೆದು ಜೀವನ ಮಾಡುವವರ ಸಂಖ್ಯೆಯೇ ಹೆಚ್ಚು. ಈಗ ವಿದ್ಯುತ್ ಕೈಕೊಟ್ಟಿರುವುದರಿಂದ ನಗರದಲ್ಲಿ ಸುಮಾರು 15 ಸಾವಿರ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರು ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.

`ಇತ್ತೀಚೆಗೆ ನೇಕಾರಿಕೆಯಲ್ಲಿ ಸ್ಥಳೀಯ ಕಾರ್ಮಿಕರಿಗಿಂತ ಬಹುತೇಕ ನೆರೆಯ ಆಂಧ್ರಪ್ರದೇಶದ ಇಂದೂಪುರ, ಅನಂತಪುರ, ಮದರೆಟ್ಟಪಲ್ಲಿ, ಗುಂಟೂರು ಕಡೆಯಿಂದ ಬಂದಿರುವವರ ಸಂಖ್ಯೆಯೆ ಹೆಚ್ಚು. ಇವರು ಭಾನುವಾರ ಬಡವಾಡೆ ನೀಡದಿದ್ದರೆ ಜೀವನ ನಡೆಸುವುದೇ ದುಸ್ತರವಾಗಲಿದೆ. ಹೀಗಾಗಿ ವಿದ್ಯುತ್ ಕೈಕೊಟ್ಟು ಸೀರೆ ನೇಯದಿದ್ದರೂ ಸಹ ಮುಂಗುಡ ಹಣ ನೀಡಿ ಕಾರ್ಮಿಕರು ಬೇರೆಡೆಗೆ ಹೋಗದಂತೆ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸ್ಥಿತಿ ವಿದ್ಯುತ್ ಚಾಲಿತ ಮಗ್ಗಗಳನ್ನು ಹೊಂದಿರುವ ಮಾಲೀಕರಿಗೆ ಉಂಟಾಗಿದೆ.

`ನಗರದ ಹೊರಭಾಗದಲ್ಲಿ ಜವಳಿಪಾರ್ಕ್ ಸ್ಥಾಪನೆಯಾದ ನಂತರ ನೇಕಾರಿಕೆಗೆ ಕಾರ್ಮಿಕರ ಕೊರತೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ವಿದ್ಯುತ್ ಸಹ ಕೈ ಕೊಟ್ಟಿರುವುದು ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ~ ಎನ್ನುತ್ತಾರೆ ನಗರದ ಕುಚ್ಚಪ್ಪನಪೇಟೆಯಲ್ಲಿನ ದಕ್ಷಿಣಾ ಮೂರ್ತಿ. 

ಸಮಯವೇ ಇಲ್ಲ: ನಾನಾ ಕಾರಣಗಳಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಈ ಹಿಂದೆ ವಿದ್ಯುತ್ ಕೊರತೆ ಉಂಟಾದಾಗ ಇಂತಿಷ್ಟು ಸಮಯ ವಿದ್ಯುತ್ ಇರುವುದಿಲ್ಲ ಎನ್ನುವ ಸಮಯವಾದರೂ ನಿಗದಿಗೊಳಿಸುತ್ತಿದ್ದರು. ಆದರೆ ಈಗ ನೋಡಿದರೆ ವಿದ್ಯುತ್ ಕಡಿತಗೊಳಿಸಲು ನಿಗದಿತ ಸಮಯವೇ ಇಲ್ಲದಾಗಿದೆ. ಇದರಿಂದ ಇಡೀ ದಿನ ನೇಕಾರರು ಊಟಕ್ಕೂ ಸಹ ಹೋಗದೆ ಮಗ್ಗಗಳ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ ಎನ್ನುತ್ತಾರೆ ನೇಕಾರರು. 

ತರಕಾರಿ ವ್ಯಾಪಾರವು ಕುಸಿತ: ನಗರದ ದಿನ ನಿತ್ಯದ ಬಹುತೇಕ ವ್ಯಾಪಾರ ವಹಿವಾಟು ಅವಲಂಭಿತವಾಗಿರುವುದೇ ನೇಕಾರಿಕೆ ಉದ್ಯಮದ ಮೇಲೆ. ಹೀಗಾಗಿ ವಿದ್ಯುತ್ ಕೈ ಕೊಟ್ಟಿರುವುದರಿಂದ ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರವು ಕುಸಿತವಾಗಿದ್ದು ರೈತರು ವ್ಯಾಪಾರಸ್ತರು ಕಂಗಾಲಾಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.