ADVERTISEMENT

ವಡೇರಹಳ್ಳಿಯಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ

ಬರಡನಹಳ್ಳಿ ಕೃಷ್ಣಮೂರ್ತಿ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST
ವಡೇರಹಳ್ಳಿಯಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ
ವಡೇರಹಳ್ಳಿಯಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ   


ಕನಕಪುರ:  ವಡೇರಹಳ್ಳಿ ಗ್ರಾಮಸ್ಥರು ಕಳೆದ ಎರಡು ವರ್ಷಗಳಿಂದ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಸಮಸ್ಯೆಗಳಿಗೆ ಸ್ಪಂದಿಸದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು  ವಡೇರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ತಾಲ್ಲೂಕಿನ ಮರಳವಾಡಿ ಹೋಬಳಿ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಡೇರಹಳ್ಳಿ ಗ್ರಾಮದಲ್ಲಿ ಸುಮಾರು 40 ಮನೆಗಳಿವೆ.
 

ಈ ಗ್ರಾಮ ಇಂದಿಗೂ ಕೂಡ ಮೂಲ ಸೌಲಭ್ಯದಿಂದ ವಂಚಿತಗೊಂಡಿದೆ. ಎರಡು ವರ್ಷಗಳ ಹಿಂದೆ ಕುಡಿವ ನೀರಿನ ಪೂರೈಕೆಗೆಂದು ಕೊರೆಯಿಸಿರುವ ಕೊಳವೆಬಾವಿ ವಿದ್ಯುತ್ ಸಂಪರ್ಕವಿಲ್ಲದೆ ತುಕ್ಕುಹಿಡಿಯುತ್ತಿದೆ. ಕಾಲೋನಿಯಲ್ಲಿ ತಾತ್ಕಾಲಿಕವಾಗಿ ಹಾಕಿರುವಂತಹ ಕೊಳವೆ ಬಾವಿಯಿಂದಲೇ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದಾರೆ. ಒಂದು ವೇಳೆ ಅದನ್ನು ನಿಲ್ಲಿಸಿದರೆ ನಮ್ಮ ಗ್ರಾಮಕ್ಕೆ ನೀರು ಇಲ್ಲದಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
 

ಪ್ರಾರಂಭದಲ್ಲಿ ಎರಡು ಗ್ರಾಮಗಳಿಗೂ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನೀರಿನ ಅಭಾವ ಜಾಸ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ನೀರಿಗಾಗಿ ಮಹಿಳೆಯರು ನಲ್ಲಿಗಳ ಮುಂದೆ ಜಗಳವಾಡಿ, ಅದು ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ರಾಜಿ ಪಂಚಾಯಿತಿ ಮೂಲಕ ಇತ್ಯರ್ಥವಾಗಿದೆ ಎಂದು ಚಂದ್ರಶೇಖರ್ ಹೇಳುತ್ತಾರೆ.
 

ADVERTISEMENT

ನೀರಿನ ಬವಣೆ ನೀಗಿಸಲು ಪಂಚಾಯಿತಿ ವತಿಯಿಂದ ಗ್ರಾಮದ ಮಧ್ಯದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಲಾಗಿದೆ. ಆದರೆ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲು ಇದುವರೆಗೂ ವಿದ್ಯುತ್ ಸಂಪರ್ಕ ಮಾತ್ರ ಕಲ್ಪಿಸಿಲ್ಲ. ಕೊಳವೆ ಬಾವಿವರೆಗೂ ಕಂಬ ಮತ್ತು ಲೈನುಗಳು ಬಂದಿವೆ. ಹೆಚ್ಚುವರಿಯಾಗಿ ಇನ್ನು ಕೇವಲ ಎರಡು ಕಂಬಗಳನ್ನು ಮಾತ್ರ ಅಳವಡಿಸಿ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಈ ಹಿಂದೆ ಇದ್ದಂತಹ ಗ್ರಾ.ಪಂ. ಸದಸ್ಯರಾದ ಅಬ್ಬಾಸ್ ಮತ್ತು ಸುಶೀಲಮ್ಮ ಅವರು ನೀರಿನ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಜಿಲ್ಲಾ ಪಂಚಾಯಿತಿಗೆ ಬರುತ್ತದೆ. ಅವರೇ ಬಗೆಹರಿಸುತ್ತಾರೆ ಎಂದು ತಮ್ಮ ಜವಾಬ್ದಾರಿಯಿಂದ ನುಣಚಿಕೊಂಡರು.

ಜಿ.ಪಂ. ಮಾಜಿ ಸದಸ್ಯರಾದ ಭುಜಂಗಯ್ಯ ಅವರು ತಮ್ಮ ಅವಧಿ ಮುಗಿಯುವವರೆಗೂ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಶೀಘ್ರದಲ್ಲಿಯೇ ಆಗುತ್ತದೆ ಎಂಬ ಭರವಸೆ ನೀಡುತ್ತಿದ್ದರು. ಹೀಗೆ ಹೇಳುತ್ತಲೇ ತಮ್ಮ ಅವಧಿ ಮುಗಿಸಿದರೆ ಹೊರತು ಗ್ರಾಮಕ್ಕೆ ನೀರು ಬರಲಿಲ್ಲ.  ಬೆಸ್ಕಾಂ ಇಲಾಖೆಯವರು ಇನ್ನೊಂದು ರೀತಿ ಹೇಳುತ್ತಾರೆ. ಇದುವರೆಗೂ ವಡೇರಹಳ್ಳಿ ಗ್ರಾಮಕ್ಕೆ ವಿದ್ಯುತ್ ಲೈನ್ ಹಾಕುವ ಸಂಬಂಧ ಯಾವುದೇ ಅರ್ಜಿಗಳು ಬಂದಿಲ್ಲ. ಇಲಾಖೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆಯಿದ್ದು, ಒಂದು ವೇಳೆ ನಿಮ್ಮಿಂದ ಪ್ರಸ್ತಾವ ಬಂದರೆ ಶೀಘ್ರದಲ್ಲೇ ಸಂಪರ್ಕ ಕಲ್ಪಿಸಿಕೊಡುವುದಾಗಿ ಹೇಳುತ್ತಾರೆ. ಸಮಸ್ಯೆ ಬಗೆಹರಿಸಬೇಕಾದ ಪ್ರತಿಯೊಬ್ಬರು ಹೀಗೆ ಸಬೂಬು ಹೇಳುತ್ತಿದ್ದರೇ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಕೊಡುವವರು ಯಾರು ಎಂದು ಗ್ರಾಮದ ಯುವ ಮುಖಂಡ ಮಾದೇಶ ಅವರ ಪ್ರಶ್ನೆ.
 

ಗ್ರಾಮದಲ್ಲಿ ಒಂದು ಹಳೇಕಾಲದ ಹ್ಯಾಂಡ್ ಪಂಪ್ ಇದೆ. ಆದರೆ ಅದು ಬಳಕೆಗೆ ಯೋಗ್ಯವಿಲ್ಲ. ಹೊಳೆ ಮತ್ತು ಕಾಲುವೆಯಲ್ಲಿ ಬರುತ್ತಿರುವ ನೀರು ಭೈರಮಂಗಲದಿಂದ ಕೊಳಚೆಯನ್ನೆಲ್ಲಾ ಹೊತ್ತು ತರುತ್ತದೆ. ಇದನ್ನು ಬಳಸಿದರೆ ಕಾಯಿಲೆಗಳು ಬರುತ್ತವೆ. ಪ್ರಸ್ತುತ ಈಗ ಕಾಲೋನಿಯ ನೀರು ಮಾತ್ರ ನಮಗೆ ಆಧಾರವಾಗಿದೆ. ಬದಲಿ  ನೀರಿನ ವ್ಯವಸ್ಥೆಯಿಲ್ಲ. ಅಂತರ್ಜಲ ಕುಸಿತದಿಂದಾಗಿ ಕಡಿಮೆ ನೀರು ಪೂರೈಕೆಯಾಗುತ್ತಿದೆ. ಜೊತೆಗೆ ಲೋಡ್ ಶೆಡ್ಡಿಂಗ್ ಕಾಟ ಬೇರೆ. ಈ ಎಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ ಗ್ರಾಮದ ಜನತೆ ಪ್ರತಿದಿನ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮದ ಕಮಲಮ್ಮ, ಚನ್ನಮ್ಮ, ಸಾವಿತ್ರಮ್ಮ, ಮಹದೇವಮ್ಮ, ಮಮತಮ್ಮ, ಜಯಮ್ಮ, ತಿಮ್ಮಮ್ಮ, ಗೀತಾ, ಲತಾ, ಭಾಗ್ಯಮ್ಮ ಮತ್ತಿತರರು ಹೇಳುತ್ತಾರೆ.
 

ಗ್ರಾಮದ ಅಭಿವೃದ್ಧಿಯನ್ನು ಗ್ರಾಮ ಪಂಚಾಯಿತಿಗಳೇ ಮಾಡಬೇಕೆಂಬ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಪಂಚಾಯಿತಿ ಮಟ್ಟದಲ್ಲಿ ಸರ್ಕಾರ ಬಂದಿದೆಯೇ ಹೊರತು, ನಿಜವಾಗಿ ಗ್ರಾಮದ ಅಭಿವೃದ್ಧಿಗೆ ಅಲ್ಲ ಎಂಬುದು ನಗ್ನಸತ್ಯ. ಇನ್ನು ಮುಂದಾದರು ಪಂಚಾಯಿತಿಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮದಲ್ಲಿನ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕಿದೆ. ಗ್ರಾ.ಪಂ.ಗಳು ಇದರಲ್ಲಿ ವಿಫಲವಾದರೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಇತ್ತ ಗಮನಹರಿಸಿ ಜನತೆಯ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯ. 
                                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.