ADVERTISEMENT

ವರ್ಕ್‌ಶಾಪ್‌ಗೆ ಬೆಂಕಿ: ರೂ 25 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ವಿಜಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಕಾರ್ಯಾಗಾರದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಎರಡು ಬಸ್‌ಗಳು ಭಸ್ಮವಾಗಿದ್ದು, ಒಟ್ಟಾರೆ ಸುಮಾರು 25 ಲಕ್ಷ ರೂ ಹಾನಿಯಾಗಿದೆ.

ಇಲ್ಲಿಯ ಅಥಣಿ ರಸ್ತೆಯ ಗ್ಯಾಂಗ್‌ಬಾವಡಿಯಲ್ಲಿರುವ ಸಾರಿಗೆ ಸಂಸ್ಥೆಯ ಕಾರ್ಯಾಗಾರದಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. ರಿಪೇರಿಗೆ ನಿಲ್ಲಿಸಿದ್ದ ಎರಡು ಬಸ್‌ಗಳು, ಕಾರ್ಯಾಗಾರದ ಮೇಲ್ಛಾವಣಿ, ವೈರಿಂಗ್ ಮತ್ತಿತರ ಸಾಮಗ್ರಿ ಸುಟ್ಟಿವೆ. ತಲಾ 7.50 ಲಕ್ಷ ರೂಪಾಯಿ ಮೌಲ್ಯದ ಎರಡು ಬಸ್‌ಗಳು ಸೇರಿದಂತೆ ಒಟ್ಟಾರೆ 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕಾರ್ಯಾಗಾರದಲ್ಲಿ ಕಾರ್ಮಿಕರು ಎಂದಿನಂತೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಆ ವೆಲ್ಡಿಂಗ್‌ನಿಂದ ಸಿಡಿದ ಕಿಡಿಯಿಂದ ಬೆಂಕಿ ಹತ್ತಿಕೊಂಡಿತ್ತು. ತಕ್ಷಣಕ್ಕೆ ಇದು ಕಾರ್ಮಿಕರ ಗಮನಕ್ಕೆ ಬರಲಿಲ್ಲ. ಏಕಾಏಕಿ ಎಲ್ಲೆಡೆ ಬೆಂಕಿ ವ್ಯಾಪಿಸಿತು. ಆಗ ಬೆಂಕಿ ನಂದಿಸಲು ಯತ್ನಿಸಿದರೂ ಹತೋಟಿಗೆ ಬರಲಿಲ್ಲ’ ಎಂದು ಈ ಅಧಿಕಾರಿ ಹೇಳಿದ್ದಾರೆ.

ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆಯೇ ಸುತ್ತಲಿನ ನಿವಾಸಿಗಳು ಆತಂಕಗೊಂಡರು. ಬೆಂಕಿ ವ್ಯಾಪಿಸಿದರೆ ಹೇಗೆ ಎಂದು ಭಯಭೀತರಾದರು.ಅಗ್ನಿ ಶಾಮಕ ಇಲಾಖೆಯವರು ಎರಡು ವಾಹನಗಳ ಸಮೇತ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ, ಅಷ್ಟೊತ್ತಿಗಾಗಲೆ ಎರಡೂ ಬಸ್‌ಗಳು ಸುಟ್ಟು ಭಸ್ಮವಾಗಿದ್ದವು ಎಂದು ಪೊಲೀಸ್ ಅಧಿಕಾರಿಗಳು   ಹೇಳಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.