ADVERTISEMENT

ವಾಂತಿ ಭೇದಿಗೆ ಮತ್ತಿಬ್ಬರು ಬಲಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸದಲಗಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಕಾಣಿಸಿಕೊಂಡಿರುವ ವಾಂತಿ- ಭೇದಿಗೆ ಭಾನುವಾರ ಬೆಳಗಿನ ಜಾವ ಮತ್ತೆ ಇಬ್ಬರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.

ವಾಂತಿ -ಭೇದಿಯಿಂದ ಬಳಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸದಲಗಾ ನಿವಾಸಿಗಳಾದ ಅಶೋಕ ಲಕ್ಷ್ಮಣ ಲೋಕರೆ (56) ಬೆಳಗಾವಿಯ `ಬಿಮ್ಸ~ನಲ್ಲಿ ಅಸು ನೀಗಿದರೆ, ಅದೇ ಪಟ್ಟಣದ ಮಧುಕರ ಗುರುನಾಥ ಸತ್ತಿಗೇರಿ (55) ಮಹಾರಾಷ್ಟ್ರದ ಸಾಂಗ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

`ಭಾನುವಾರವೂ ಸದಲಗಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 29 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಆ ಪೈಕಿ 11 ಜನರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸದಲಗಾ ಪರಿಸರವನ್ನು  `ಕಾಲರಾ ಪೀಡಿತ ಪ್ರದೇಶ~ವೆಂದು ಘೋಷಣೆ ಮಾಡಿದ್ದು, ಅಗತ್ಯ ಮುಂಜಾಗ್ರತೆಗಳನ್ನು ವಹಿಸಲು ಸೂಚನೆ ನೀಡಿದ್ದಾರೆ. ಸದಲಗಾದಲ್ಲಿ ಉಪ ವಿಭಾಗಾಧಿಕಾರಿ ಡಾ.ರುದ್ರೇಶ್ ಘಾಳಿ ಸಭೆ ನಡೆಸಿದ್ದು, ಜಿಲ್ಲಾಧಿಕಾರಿಗಳು ನಿರ್ದೇಶಿಸಿರುವ ಅಗತ್ಯ ಮುಂಜಾಗ್ರತೆಗಳನ್ನು ಪಾಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸೂಚನೆ ನೀಡಿದರು ಎಂದು ಚಿಕ್ಕೋಡಿಯ ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಬಿ.ಕುಲಕರ್ಣಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.