ADVERTISEMENT

ವಾನರನ ರಕ್ಷಣೆಗೆ ಮುಂದಾದ ಜನ!

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ವಿಜಯಪುರ: ಗಾಯಗೊಂಡಿದ್ದ ಕೋತಿಯೊಂದನ್ನು ರಕ್ಷಣೆ ಮಾಡುವ ಮೂಲಕ ಇಲ್ಲಿನ ಜನರು ಪಶು ಪ್ರೇಮವನ್ನು ಮೆರೆದಿದ್ದಾರೆ.ಇಲ್ಲಿನ ಬಸವೇಶ್ವರನಗರ ಬಸ್ ನಿಲ್ದಾಣದ ಬಳಿಯ ಮರವೊಂದರ ಮೇಲೆ ಕೋತಿಗಳು ಕಿತ್ತಾಡುತ್ತಿದ್ದವು.ವಯಸ್ಸಾಗಿದ್ದ ಕೋತಿಯೊಂದು ಗಲಾಟೆಯ ನಡುವೆ ಆಯ ತಪ್ಪಿ ಕೆಳಗೆ ಬಿತ್ತು.

ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕೋತಿಯನ್ನು ನಾಯಿಗಳು ಕಚ್ಚಿ ಮತ್ತಷ್ಟು ನಿತ್ರಾಣಗೊಳಿಸಿವೆ. ಗಾಯಗೊಂಡಿದ್ದ ಕೋತಿಯನ್ನು ಗಮನಿಸಿದ ಜನರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಅಗತ್ಯ ಚಿಕಿತ್ಸೆ ಕೊಡಿಸುವ ಮೂಲಕ ಕೋತಿಗೆ ಜೀವ ದಾನ ಮಾಡಿದರು.

ನಿವೃತ್ತ ಪಶುವೈದ್ಯ ಡಾ.ಶ್ರೀನಿವಾಸರೆಡ್ಡಿ ಅವರ ಸಹಕಾರದಿಂದ ಗಾಯಗಳಿಗೆ ಹೊಲಿಗೆ ಹಾಕಿ ಶುಶ್ರೂಷೆ ಮಾಡಲಾಗಿದೆ.

ಚರಂಡಿ ಶುಚಿ
ವಿಜಯಪುರ: ಪಟ್ಟಣದ ವಾರ್ಡ್ ನಂ.11 ರಲ್ಲಿರುವ ಚರಂಡಿಯಲ್ಲಿ ಕಲುಷಿತ ನೀರು ನ್ಲ್ಲಿಲದಂತೆ ಜೆಸಿಬಿ ಯಂತ್ರಗಳ ಮೂಲಕ ಕಸವನ್ನು ಹೊರತೆಗೆಯಲಾಯಿತು.ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್, ಸ್ಥಾಯಿಸಮಿತಿಯ ಅಧ್ಯಕ್ಷ ಎಂ.ವೀರಣ್ಣ, ಪುರಸಭಾ ಸದಸ್ಯ ಎಂ.ಮುನಿಶಾಮಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.

ಆಗ್ರಹ: ಮುಖ್ಯ ಚರಂಡಿಯಲ್ಲಿ ಆಗಿಂದಾಗ್ಗೆ ಮಣ್ಣು, ಕಸ ಮುಚ್ಚಿಕೊಂಡು ನೀರು ನಿಂತು ಕಲುಷಿತಗೊಳ್ಳುತ್ತಿದ್ದು, ಕೂಡಲೇ ಚರಂಡಿಗೆ ಶಾಶ್ವತವಾಗಿ ಸಿಮೆಂಟ್ ಗೋಡೆ ನಿರ್ಮಿಸಬೇಕೆಂದು ಬಿ.ಜೆ.ಪಿ ಮುಖಂಡ ಸಿ.ನೀಲಕಂಠಪ್ಪ ಆಗ್ರಹಿಸಿದ್ದಾರೆ.

ಹಿಂದಿನ ವರ್ಷದಲ್ಲಿ ಚಿಕುನ್‌ಗುನ್ಯಾದಂತಹ ರೋಗಗಳಿಗೆ ತಾಲ್ಲೂಕಿನ ಜನತೆಯು ತುತ್ತಾಗಿದ್ದಾರೆ. ಸೊಳ್ಳೆಗಳ ಆವಾಸ ಸ್ಥಾನವಾಗಿರುವ ಕೊಳಚೆ ನೀರು ಹರಿಯುವ ಮೋರಿಯನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮೋರಿ ಕಿರಿದುಗೊಳಿಸುವುದರಿಂದ ನೀರು ಸರಾಗವಾಗಿ ಹರಿಯುವುದಲ್ಲದೇ ಉಳಿಕೆ ಜಾಗದಲ್ಲಿ ಎರಡೂ ಕಡೆ ವಿಶಾಲವಾದ ರಸ್ತೆಗಳನ್ನು ನಿರ್ಮಿಸಿ, ಅಭಿವೃದ್ಧಿಪಡಿಸುವುದಾದ್ದರಿಂದ ಪಟ್ಟಣದ ಪ್ರಮುಖ ಭಾಗವಾದ ಗಾಂಧಿಚೌಕ, ಮುಖ್ಯರಸ್ತೆ, ಗಂಗಾತಾಯಿ ದೇವಾಲಯದ ಸರ್ಕಲ್, ಎಲ್ಲಮ್ಮತಾಯಿ ಮತ್ತು ಧರ್ಮರಾಯಸ್ವಾಮಿ ದೇವಾಲಯದ ಬೀದಿಗಳಲ್ಲಿ ನಿಲ್ಲಿಸಬಹುದಾದ ವಾಹನಗಳಿಗೆಲ್ಲಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.