ಚನ್ನರಾಯಪಟ್ಟಣ: ಪ್ರತಿ ವರ್ಷದಂತೆ ಶ್ರೀರಾಮನವಮಿ ಅಂಗವಾಗಿ ಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಗಂಗಾಧರೇಶ್ವರ, ಕೆಂಪಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಭಾನುವಾರ ರಥೋತ್ಸವದ ಅಂಕುರಾರ್ಪಣ ನೆರವೇರಿಸಲಾಯಿತು.ಸೋಮವಾರ ಚಂದ್ರಮಂಡಲೋತ್ಸವ, ಬಲಿ ಉತ್ಸವ, ಸರ್ಪವಾಹನೋತ್ಸವ, ಕುದುರೆ ವಾಹನೋತ್ಸವ, ಗಿರಿಜಾ ಕಲ್ಯಾಣ, ಪಲ್ಲಕಿ ಉತ್ಸವ ನಡೆಯಿತು.
ಮಂಗಳವಾರ ಬೆಳಿಗ್ಗೆ ಸೂರ್ಯ ಮಂಡಲೋತ್ಸವದ ನಂತರ ಅಲಂಕೃತ ರಥದಲ್ಲಿ ಉತ್ಸವ ದೇವರನ್ನು ಪ್ರತಿಷ್ಠಾಪಿಸಲಾಯಿತು. ಮಂಗಳವಾದ್ಯದೊಂದಿಗೆ ಭಕ್ತರು ಘೋಷಣೆ ಕೂಗುತ್ತ ತೇರನ್ನು ಎಳೆದರು. ಏ. 25 ವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಸೂರ್ಯ ಮಂಡಲೋತ್ಸವ, ಮೃಗಯಾತ್ರೋತ್ಸವ, ಓಕುಳಿ ಉತ್ಸವ, ಕೆಂಪಮ್ಮ ದೇವಿಯ ಮದುವೆ ಶಾಸ್ತ್ರ, ಹೂವಿನ ಪಲ್ಲಕಿ ಉತ್ಸವ, ಕೆಂಡೋತ್ಸವ ನಡೆಯಲಿದೆ.
23ಕ್ಕೆ ಕೆಂಪಮ್ಮ ದೇವಿ ರಥೋತ್ಸವ ಏರ್ಪಡಿಸಲಾಗಿದೆ. ಶಾಂತೋತ್ಸವ, ಚಂದ್ರಮಂಡಲೋತ್ಸವ, ಚಿತ್ರ ಮಂಟಪೋತ್ಸವ. 25ಕ್ಕೆ ವಸಂತಮಾಧವ ಪೂಜೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ತೆರೆ ಬೀಳಲಿದೆ. ಸಂತೇಶಿವರ, ಗಂಜಿಗೆರೆ, ಹೊಸಹಳ್ಳಿ, ಯಾಚನಘಟ್ಟ, ದುಗ್ಗೋನಹಳ್ಳಿ, ಚನ್ನಗೋನಹಳ್ಳಿ, ಗಂಗೇನಹಳ್ಳಿ, ರಾಂಪುರ, ಚಿಕ್ಕೋನಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.