ಬೀಳಗಿ: ರಾಷ್ಟ್ರೀಯ ಹೆದ್ದಾರಿ 218ರ ಮೇಲಿರುವ ಬೀಳಗಿ ಕ್ರಾಸ್‌ನಿಂದ 100 ಮೀ. ದೂರ ಹೋದರೆ ಸಾಕು, ಆತ ನಡೆದಾಡುತ್ತಾನೆ, ಓಡುತ್ತಾನೆ, ಜಿಗಿಯುತ್ತಾನೆ, ಕುಣಿದು ಕುಪ್ಪಳಿಸುತ್ತಾನೆ, ಅಷ್ಟೇ ಏಕೆ ಒಬ್ಬನೇ ಬೈಕ್ ಸವಾರಿ ಮಾಡುತ್ತಾನೆ.
ಆದರೆ ಬೀಳಗಿ ಕ್ರಾಸ್‌ಗೆ ಬರುತ್ತಿದ್ದಂತೆಯೇ ಮೊದಲು ಅರೆ ಕ್ಷಣ ಆತನಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಮುಂದಿನ ಕ್ಷಣಗಳಲ್ಲಿಯೇ ಎರಡೂ ಕಾಲುಗಳು ಸೆಟೆದುಕೊಳ್ಳುತ್ತವೆ. ಸೊಂಟದಿಂದ ಕೆಳಗಿನ ಭಾಗವೆಲ್ಲ ನಿಷ್ಕೃಿಯಗೊಳ್ಳುತ್ತದೆ. ಹೆಜ್ಜೆ ಇಡಲೂ ಸಾಧ್ಯವಾಗದಷ್ಟು ಅಪಾರ ಯಾತನೆ. ಮುಂದಕ್ಕೆ ಚಲಿಸಬೇಕಾದರೆ ಎರಡೂ ಪಾದಗಳನ್ನು ಜೋಡಿಸಿಯೇ ಇಂಚಿಂಚು ಪಕ್ಕಕ್ಕೆ ಜರುಗುತ್ತಾ ಸಾಗುತ್ತಾನೆ. ಸೆಟೆದು ನಿಂತ ಕಾಲುಗಳನ್ನು ಇನ್ನೊಬ್ಬರು ಅಪಾರ ಶಕ್ತಿ ಹಾಕಿ ಮಣಿಸಬೇಕು.
ಈತನ ಹೆಸರು ಎನ್. ರಾಘವೇಂದ್ರ. ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಆಂಗ್ಲ ಮಾಧ್ಯಮದ 8ನೇ ತರಗತಿಯ ವಿದ್ಯಾರ್ಥಿ. ನೋಡಲು ತುಂಬಾ ಚೂಟಿ. ಓದಿನಲ್ಲಿಯೂ ಮುಂದು. ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾನೆ.
ತಂದೆ ನಾರಾಯಣಸ್ವಾಮಿ ಎ.ವಿ. ಥಾಮಸ್ ಕಂಪೆನಿಯಲ್ಲಿ ಸಣ್ಣ ಉದ್ಯೋಗಿ. ಗೋವಿನದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಮನೆ. ಅಲ್ಲಿಂದ ಅರ್ಧ ಕಿ.ಮೀ. ಅಂತರದಲ್ಲಿ ರಾಘವೇಂದ್ರ ಓದುವ ಶಾಲೆ. ನಿತ್ಯದಂತೆ ಶಾಲೆಗೆ ಸೈಕಲ್ ಮೇಲೆ ಹೋಗುತ್ತಿರಬೇಕಾದರೆ ಹೆದ್ದಾರಿ ಮೇಲಿರುವ ಹುಣಸೇ ಮರದ ಬಳಿ ಯಾರೋ ತನ್ನ ಸೈಕಲನ್ನು ಹಿಂದಕ್ಕೆ ಎಳೆದಂತಾಗಿದೆ. ಸೈಕಲ್ ಪೆಡಲನ್ನು ಎಷ್ಟು ತುಳಿದರೂ ಸೈಕಲ್ ಮುಂದೆ ಹೋಗುತ್ತಿಲ್ಲ. ಗಾಬರಿಗೊಂಡ ಹುಡುಗ ಮರಳಿ ಮನೆಗೆ ಹೋಗಿ ಮನೆಯವರ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ. ಹುಡುಗ ಏನೋ ಹೇಳುತ್ತಿದ್ದಾನೆಂದು ಮನೆಯವರಿಂದ ಮೊದಮೊದಲು ತಾತ್ಸಾರ.
ಒಂದರೆಡು ದಿನಗಳ ನಂತರ ಮೊದಲು ತಲೆನೋವು. ಮತ್ತೆರಡು ದಿನ ಬಿಟ್ಟು ಕಣ್ಣು ನೋವು. ನಂತರ ವಾಂತಿ, ವಿಪರೀತ ಕೆಮ್ಮು ಪ್ರಾರಂಭಗೊಂಡಿದೆ. ಆ ಮೇಲೆ ಬಲಗೈ, ಎಡಗಾಲು, ನಂತರ ಬಲಗಾಲು ಒಂದೊಂದಾಗಿ ಸೆಟೆದುಕೊಳ್ಳುತ್ತ ಸ್ವಾಧೀನ ಕಳೆದುಕೊಳ್ಳುತ್ತ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಳ್ಳುತ್ತ ಹುಡುಗ ಯಾತನೆ ಅನುಭವಿಸತೊಡಗಿದ್ದಾನೆ.
ಈ ಯಾತನೆಯನ್ನು ಕಂಡ ಹೆತ್ತವರು ಹುಡುಗನನ್ನು ಚಿಕಿತ್ಸೆಗಾಗಿ ಕರೆದುಕೊಂಡ ಹೋಗದ, ಚಿಕಿತ್ಸೆ ಮಾಡಿಸದ ಸ್ಥಳಗಳೇ ಇಲ್ಲ. ವೈದ್ಯರು, ನರರೋಗ ತಜ್ಞರು, ಮನೋ ವೈದ್ಯರು ಹೀಗೆ ಎಲ್ಲೆಲ್ಲೂ ತಿರುಗಾಡಿದ್ದಾರೆ. ಸ್ಕ್ಯಾನಿಂಗ್, ಇಂಜೆಕ್ಶನ್, ಮಾತ್ರೆಗಳು, ಔಷಧಿಗಳು ಎಲ್ಲವೂ ಮುಗಿದು ಗುಣ ಕಾಣದಿದ್ದಾಗ ನಂತರದ ಸರದಿ ಬಾಬಾಗಳ ಬೂದಿ, ತಾಯತ, ಲಿಂಬೀಹಣ್ಣು, ತೆಂಗಿನಕಾಯಿ, ಸ್ವಾಮಿಗಳ ಮಂತ್ರದ ಬೆತ್ತ ಎಲ್ಲವೂ ಮುಗಿದು ಈಗ ಕೈ ಚೆಲ್ಲಿ ಕುಳಿತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.