ADVERTISEMENT

ವಿದ್ಯುತ್ ಕೊರತೆಗೆ ರಾಜ್ಯವೇ ಹೊಣೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ತುಮಕೂರು:  ರಾಷ್ಟ್ರೀಯ ಗ್ರಿಡ್‌ನಿಂದ ರಾಜ್ಯಕ್ಕೆ ವಿದ್ಯುತ್ ನೀಡುತ್ತಿಲ್ಲ, ಸಕಾಲಕ್ಕೆ ಕಲ್ಲಿದ್ದಲು ಪೂರೈಸುತ್ತಿಲ್ಲ ಎಂದು ವಿನಾ ಕಾರಣ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಕೇಂದ್ರವನ್ನು ದೂರುವುದರ ಬದಲು ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸರ್ಕಾರ ಮಾಡಿದ ಸಾಧನೆಯನ್ನು ಮೊದಲು ಜನರ ಮುಂದಿಡಲಿ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸವಾಲೆಸೆದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಛತ್ತೀಸ್‌ಗಡದಿಂದ ವಿದ್ಯುತ್ ತರುತ್ತೇವೆ ಎಂದು ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಭರವಸೆ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಸರ್ಕಾರಕ್ಕೇ ಆ ಪ್ರಸ್ತಾವನೆ ಮರೆತು ಹೋದಂತೆ ಇದೆ ಎಂದು ಛೇಡಿಸಿದರು.

ಉತ್ತಮ ಗುಣಮಟ್ಟದ ಕಲ್ಲಿದ್ದಲು ತರಿಸಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ. ರಾಜ್ಯ ಸರ್ಕಾರ ಎಸ್ಕಾಂಗಳಿಗೆ ಸಕಾಲದಲ್ಲಿ ಬಾಕಿ ಪಾವತಿಸಿದರೆ, ಎಸ್ಕಾಂಗಳು ವಿದ್ಯುತ್ ಉತ್ಪಾದನಾ ಕಂಪೆನಿಯಾದ ಕೆಪಿಸಿಗೆ ಹಣ ಪಾವತಿಸಲು ಸಾಧ್ಯ. ಇಷ್ಟಾದರೆ ಮಾತ್ರ ಕೆಪಿಸಿ ಸಕಾಲದಲ್ಲಿ ಕಲ್ಲಿದ್ದಲು ಕಂಪೆನಿಗಳಿಗೆ ಹಣ ಕೊಟ್ಟು ಕಚ್ಚಾವಸ್ತು ತರಿಸಿಕೊಳ್ಳಬಹುದು ಎಂದರು.

ಹೊರಗಿನಿಂದ ವಿದ್ಯುತ್ ಖರೀದಿ ಮಾಡುವ ಬದಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪೆನಿಗಳಿಂದಲೇ ವಿದ್ಯುತ್ ಖರೀದಿಸಬಹುದು. ಈ ಕುರಿತೂ ರಾಜ್ಯ ಸರ್ಕಾರ ಆಲೋಚಿಸುತ್ತಿಲ್ಲ. ಅವರಿಗೆ ಬಾಕಿ ಹಣ ಪಾವತಿಸಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳು ಕೆಪಿಸಿಗೆ ವಿದ್ಯುತ್ ಮಾರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯದೆಲ್ಲೆಡೆ ಟ್ರಾನ್ಸ್‌ಫಾರ್ಮರ್‌ಗಳ ತೀವ್ರ ಕೊರತೆಯಿದೆ. ಹೊಸ ಟ್ರಾನ್ಸ್‌ಫಾರ್ಮರ್ ಖರೀದಿಗೆ ಸರ್ಕಾರದ ಬಳಿ ಹಣವಿಲ್ಲ. ಗ್ರಾಮೀಣ ಪ್ರದೇಶಗಳು ಕಗ್ಗತ್ತಲಲ್ಲಿ ದಿನದೂಡುವಂತಾಗಿದೆ ಎಂದು ದೂರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.